ರಾಜ್‌ಗಢ: ಜನರು ಸರ್ಕಾರದ ಬಳಿ 'ಭಿಕ್ಷೆ' ಬೇಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟವರಿಂದ ಇವರು ಪಾಠ ಕಲಿಯಬೇಕಿದೆ ಎಂದು ಮಧ್ಯಪ್ರದೇಶ ಸಚಿವ ಪ್ರಹ್ಲಾದ ಸಿಂಗ್ ಪಟೇಲ್ ಅವರು ಹೇಳಿದರು.
ಪಂಚಾಯತ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರ ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.
ರಾಜಗಢ ಜಿಲ್ಲೆಯ ಸುಠಾಲಿಯಾ ನಗರದಲ್ಲಿ ಶನಿವಾರ ನಡೆದ ರಾಣಿ ಅವಂತಿ ಬಾಯಿ ಲೋಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕೆಲವರು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಯಾಕಾಗಿ ಅವರು ತ್ಯಾಗ ಮಾಡಿದರು? ಅವರ ಜೀವನ ಮೌಲ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕೂ ಯಶಸ್ವಿಯಾಗುತ್ತದೆ' ಎಂದು ಹೇಳಿದರು.
'ನಾಯಕರನ್ನು ಆಹ್ವಾನಿಸಿ ವೇದಿಕೆಯ ಮೇಲೆ ಕರೆದು ಹಾರ ಹಾಕಲಾಗುತ್ತದೆ ಮತ್ತು ಅವರಿಗೆ ರಾಶಿ ರಾಶಿ ಅರ್ಜಿಗಳನ್ನು ನೀಡಲಾಗುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ. ಯಾವಾಗಲೂ ಸ್ವೀಕರಿಸುವ ಬದಲು, ನೀಡುವ ಮನಸ್ಥಿತಿ ಬೆಳೆಸಿಕೊಳ್ಳಿ' ಎಂದು ಸಲಹೆ ನೀಡಿದರು.