ನವದೆಹಲಿ: ಸರ್ಕಾರಿ ಗುತ್ತಿಗೆ ಮಸ್ಲಿಮರಿಗೆ ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರ ಬಗ್ಗೆ ರಾಜ್ಯಸಭೆಯಲ್ಲಿ ಸೋಮವಾರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆಯಿತು.
ಭೋಜನ ವಿರಾಮದ ಬಳಿಕ ಕಲಾಪ ಆರಂಭಗೊಂಡಾಗ, ಪಟ್ಟಿ ಮಾಡಲಾದ ವಿಷಯಗಳನ್ನು ಮಂಡಿಸಲಾಯಿತು.
ಬಳಿಕ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಉಪಸಭಾಪತಿ ಹರಿವಂಶರಾಯ್ ಅವಕಾಶ ನೀಡಿದರು. ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಂವಿಧಾನವನ್ನು ಬದಲಿಸುವ ಬಗ್ಗೆ ಹೇಳಿದ್ದಾರೆ ಎನ್ನುವ ಆರೋಪವನ್ನು ಈ ವೇಳೆ ಖರ್ಗೆ ಅಲ್ಲಗೆಳೆದರು.
ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಿಸುವ ಬಗ್ಗೆ ಕಾಂಗ್ರೆಸ್ ಯಾವ ಹೇಳಿಕೆಯನ್ನೂ ನೀಡಿಲ್ಲ ಎಂದು ಅವರು ಹೇಳಿದರು.
ಈ ವೇಳೆ ಎದ್ದು ನಿಂತ ಸಭಾ ನಾಯಕ ಜೆ.ಪಿ ನಡ್ಡಾ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಗುತ್ತಿಗೆ ಮಸ್ಲಿಮರಿಗೆ ಮೀಸಲಾತಿ ನೀಡುತ್ತಿದೆ ಎಂದು ಹೇಳಿದರು.
ಅವರ ಈ ಹೇಳಿಕೆ ಗದ್ದಲಕ್ಕೆ ಕಾರಣವಾಯಿತು. ಎರಡೂ ಕಡೆಯಿಂದ ಘೋಷಣೆಗಳು ಮೊಳಗಿದವು. ಕೊನೆಗೆ ಕಲಾಪವನ್ನು 15 ನಿಮಿಷ ಮುಂದೂಡಲಾಯಿತು.