ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ತಾಂತ್ರಿಕ ಸ್ಥಾನ ಸಂಬಂಧಿಸಿದ ವಿವಾದ ಮುಗಿದ ಅದ್ಯಾಯವಾಗಿದ್ದು, ನ್ಯಾಯಾಲಯದ ತೀಪಿನ ಉಲ್ಲಂಘನೆ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿ ಹೆಸರಲ್ಲಿ ನೀಡಿರುವ ಕೇಸು ಔಚಿತ್ಯ ಕಳೆದುಕೊಂಡಿರುವುದಾಗಿಹೈಕೋರ್ಟು ಸ್ಪಷ್ಟಪಡಿಸಿದೆ.
ಹೈಕೋರ್ಟು ಈಗಾಗಲೇ ನೀಡಿದ ತೀರ್ಪಿನ ಆದೇಶದನ್ವಯ ಬ್ರಹ್ಮಕಲಶ ಸಮಿತಿಯ ಪ್ರಧಾನ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೇವಸ್ವಂ ಬೋರ್ಡ್ ಆಯುಕ್ತರು ನಿರ್ಣಯ ತಳೆದಿದ್ದಾರೆ. ಈ ಕುರಿತು ಔದ್ಯೋಗಿಕ ತೀರ್ಪು ಪ್ರಕಟವಾಗುವ ಮೊದಲೇ ಬ್ರಹ್ಮಕಲಶೋತ್ಸವ ಸಮಿತಿ ಹೆಸರಲ್ಲಿ ಹೈಕೋರ್ಟಿಗೆ ದೂರು ಸಲ್ಲಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಹೈಕೋರ್ಟು ಆದೇಶ ಉಲ್ಲಂಘನೆ ಬಗೆಗಿನ ದೂರನ್ನು ವಜಾಗೊಳಿಸಿದೆ.
ಮಧೂರು ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ಮಾ.27ರಿಂದ ಆರಂಭಗೊಂಡು ಎ.7ರ ತನಕ ನಡೆಯಲಿದ್ದು, ಈ ಸಂಬಂಧ ದೇವಾಲಯದ ತಾಂತ್ರಿಕ ವಿಧಿವಿಧಾನ ನಡೆಸುವ ಹಕ್ಕಿನ ಕುರಿತಾಗಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಪ್ರಕರಣ ಹೈಕೋರ್ಟು ಮೆಟ್ಟಲೇರಿತ್ತು. ಕೇಸು ಪರಿಗಣಿಸಿದ ಹೈಕೋರ್ಟು ಬ್ರಹ್ಮಕಲಶ-ಮೂಡಪ್ಪ ಸೇವೆಯನ್ನು ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ತಂತ್ರಿಗಳು ಮತ್ತು ಬ್ರಹ್ಮಶ್ರೀ ದೇರೆಬೈಲು ಡಾ.ಶಿವಪ್ರಸಾದ ತಂತ್ರಿಗಳ ಸಂಯುಕ್ತ ನೇತೃತ್ವದಲ್ಲಿ ಆಗಮ ವಿಚಾರೋಕ್ತವಾಗಿ ನಡೆಸಲು ತೀರ್ಪು ನೀಡಿತ್ತು. ಈ ಕುರಿತು ದೇವಸ್ವಂ ಮಂಡಳಿ ಸಂಬಂಧಪಟ್ಟವರನ್ನು ಕರೆಸಿ ಸಮಾಗಮ, ಸಹಪಂಕ್ತಿ ಕೂಟ ನಡೆಸಿ ಒಮ್ಮತದ ನಿರ್ಣಯ ಕೈಗೊಳ್ಳಬೇಕೆಂದು ಆದೇಶಿಸಿತ್ತು.
ಇದರನ್ವಯ ಮಲಬಾರ್ ದೇವಸ್ವಂ ಆಯುಕ್ತರಾದ ಬಿಜು ಹಾಗೂ ಸಹ ಆಯುಕ್ತ ಪ್ರದೀಪ್ ನೇತೃತ್ವದಲ್ಲಿ ಮಧೂರು ದೇವಳದ ಅತಿಥಿಗೃಹದಲ್ಲಿ ಮಾ.5ರಂದು ಉಭಯ ತಂತ್ರಿಗಳು, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ದೂರುದಾತರ ಉಪಸ್ಥಿತಿಯಲ್ಲಿ ಇತ್ಯರ್ಥ ಮಾತುಕತೆ ನಡೆಸಿತ್ತು. ಇದರಂತೆ ದೇರೆಬೈಲು ತಂತ್ರಿಗಳಿಗೆ ಆರಂಭದ ಬ್ರಹ್ಮಕಲಶ ಹಕ್ಕನ್ನೂ, ಅನಂತರದ ಮೂಡಪ್ಪ ಸೇವೆಯ ಹಕ್ಕನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರಿಗೂ ಹಂಚಿಕೆ ಮಾಡಿ ಉಭಯ ತಂತ್ರಿಗಳ ಸಾಮರಸ್ಯದ ಒಪ್ಪಿಗೆ ಮೇರೆಗೆ ವಿವಾದಿತ ಪ್ರಕರಣಕ್ಕೆ ಇತ್ಯರ್ಥ ಕಾಣಲಾಗಿತ್ತು. ಇದಕ್ಕೆ ತಂತ್ರಿಗಳೂ ಸೇರಿದಂತೆ ಆ ಸಂದರ್ಭದಲ್ಲಿ ಯಾರ ಆಕ್ಷೇಪಗಳೂ ಇರಲಿಲ್ಲ. ಆ ಬಳಿಕವೂ ಇತ್ಯರ್ಥಗೊಂಡ ವಿವಾದದ ಬಗ್ಗೆ ಉಭಯ ತಂತ್ರಿಗಳೂ ಪ್ರಶ್ನಿಸಿರಲಿಲ್ಲ.
ಆದರೆ ದೇವಸ್ವಂ ಬೋರ್ಡ್ ಆಯುಕ್ತರು ಕೈಗೊಂಡ ತೀರ್ಮಾನವನ್ನು ತೀರ್ಪಿನ ಆದೇಶವಾಗಿ ಪ್ರಕಟಿಸುವ ಮೊದಲೇ ಇದನ್ನು ಪ್ರಶ್ನಿಸಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ 'ಹೈಕೋರ್ಟು ಆದೇಶ ಉಲ್ಲಂಘನೆ' ಬಗ್ಗೆ ಹೈಕೋರ್ಟಿಗೆ ದೂರು ಸಲ್ಲಿಸಿದ್ದರು. ದೂರನ್ನು ಸಮಗ್ರ ವಿಚಾರಣೆ ನಡೆಸಿದ ಹೈಕೋರ್ಟು ಸ್ಪಷ್ಟ ಕಾರಣಗಳೊಂದಿಗೆ ತಿರಸ್ಕರಿಸಿ ತೀರ್ಪು ಪ್ರಕಟಿಸಿದೆ.
ದೇವಸ್ವಂ ಕಮೀಷನರ್ ಹೈಕೋರ್ಟು ಆದೇಶ ಉಲ್ಲಂಘಿಸಿ, ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪದೊಂದಿಗೆ ದೂರು ನೀಡಲಾಗಿತ್ತು. ಬ್ರಹ್ಮಕಲಶೋತ್ಸವ ದಿನ ಸಮೀಪಿಸುತ್ತಿದ್ದಂತೆ ಭಕ್ತ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದ್ದ ಈ ಅರ್ಜಿಯನ್ನು ವಜಾಗೊಳಿಸಿರುವುದು ಭಕ್ತಾದಿಗಳಲ್ಲೂ ಸಮಾಧಾನಕ್ಕೆ ಕಾರಣವಾಗಿದೆ.