ನವದೆಹಲಿ: ಗಡಿಯ ವಿಚಾರವಾಗಿ ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳ ನಡುವೆ ನವದೆಹಲಿಯಲ್ಲಿ ಈ ವರ್ಷ ನಡೆಯಬೇಕಿರುವ ಮುಂದಿನ ಹಂತದ ಸಭೆಗೆ ಗಮನಾರ್ಹವಾದ ಸಿದ್ಧತೆಗಳನ್ನು ಒಟ್ಟಾಗಿ ನಡೆಸಲು ಎರಡೂ ದೇಶಗಳು ಮಂಗಳವಾರ ಒಪ್ಪಿವೆ.
ಬೀಜಿಂಗ್‌ನಲ್ಲಿ ನಡೆದ ಮಾತುಕತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬೀಜಿಂಗ್‌ನಲ್ಲಿನ ಮಾತುಕತೆಯು ರಚನಾತ್ಮಕವಾದ, ಪೂರಕವಾದ ವಾತಾವರಣದಲ್ಲಿ ನಡೆಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.
ಎರಡೂ ದೇಶಗಳು ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದವು ಎಂದು ಕೂಡ ಸಚಿವಾಲಯ ತಿಳಿಸಿದೆ.
ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧವು ವೃದ್ಧಿಯಾಗಬೇಕು ಎಂದಾದರೆ ಗಡಿಯಲ್ಲಿ ಶಾಂತಿ ನೆಲಸಬೇಕಿರುವುದು ಮಹತ್ವದ್ದು ಎಂದು ಸಚಿವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ.