ಕಾಸರಗೋಡು: ವಿದೇಶದಿಂದ ಊರಿಗೆ ಆಗಮಿಸಿದ್ದ ಕಣ್ಣೂರು ಪೇರಾಲ್ ಕಾರಕುನ್ನು ಹೌಸ್ ನಿವಾಸಿ, ಮಾವುಂಗಾಲ್ ಪೇರಡ್ಕದಲ್ಲಿ ವಾಸಿಸುತ್ತಿದ್ದ ಜಮೀಶ್ ಫಿಲಿಪ್(40)ಅವರ ಮೃತದೇಹ ಕಾಞಂಗಾಡು ರೈಲ್ವೆ ನಿಲ್ದಾಣ ಸನಿಹದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಗುರುವಾರ ಬೆಳಗ್ಗೆ ರೈಲು ಆಗಮಿಸುತ್ತಿದ್ದಂತೆ ವ್ಯಕ್ತಿಯೊಬ್ಬ ರೈಲ್ವೆ ಹಳಿಗೆ ಧುಮುಕುತ್ತಿರುವುದನ್ನು ಕಂಡ ರೈಲಿನ ಲೊಕೋಪೈಲಟ್ ಕಾಞಂಗಾಡು ನಿಲ್ದಾಣ ಅಧಿಕಾರಿಗಳಿಗೆ ನೀಡಿದ ಮಾಹಿತಿಯನ್ವಯ ಹೊಸದುರ್ಗ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ದೇಹ ಎರಡು ತುಂಡಾಗಿ ಹಳಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಜೇಬಲ್ಲಿ ಲಭಿಸಿದ ಆಧಾರ್ ಕಾರ್ಡಿನ ವಿಳಾಸದನ್ವಯ ಗುರುತು ಪತ್ತೆಹಚ್ಚಲಾಗಿತ್ತು. ಬುಧವಾರ ರಾತ್ರಿ ಈ ವ್ಯಕ್ತಿಯನ್ನು ಮಾವುಂಗಾಲ್ ಪೇರಡ್ಕದಲ್ಲಿ ಕಂಡವರಿದ್ದು, ಗುರುವಾರ ಬೆಳಗ್ಗೆ ಕಾಞಂಗಾಡಿಗೆ ತೆರಳಿರಬೇಕೆಂದು ಸಂಶಯಿಸಲಾಗಿದೆ. ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.