ಬದಿಯಡ್ಕ: ಜನ ಸಮೂಹದ ಒಳಿತಿಗಾಗಿ, ಕೃಷಿ, ಉದ್ಯೋಗಕ್ಷೇತ್ರಗಳಲ್ಲಿನ ಸಕಲ ದುರಿತ ನಿವಾರಣೆಗಾಗಿ ಹಾಗು ಅಧ್ವೈತ ತತ್ವದ ಮೇಲೆ ಬೆಳಕು ಚೆಲ್ಲಲು ಭಕ್ತ ಜನ ಮನ ಸಮೂಹದ ಮಧ್ಯೆ ಸಂಚರಿಸಿ ಶಂಕರ ಪಂಚಮಿಯಂದು ಭಾನ್ಕುಳಿ ಮಠದಲ್ಲಿ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಕರಕಮಲಗಳಿಂದ ಪೂಜೆಗೊಳ್ಳಲಿರುವ ಶ್ರೀ ಮಹಾ ಪಾದುಕೆ ಅಧ್ವೈತ ರಥ ಯಾತ್ರೆಯು ಮುಳ್ಳೇರಿಯ ಮಂಡಲದ ಪೆರಡಾಲ ವಲಯಕ್ಕೆ ಆಗಮಿಸಿದ ಸಂದರ್ಭ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಪರಿಸರದಲ್ಲಿ ಭಕ್ತಿಭಾವಗಳಿಂದ ಸ್ವಾಗತಿಸಲಾಯಿತು.
ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಅಧ್ವೈತ ರಥಕ್ಕೆ ಹಾರಾರ್ಪಣೆ ಮತ್ತು ಫಲಪುಷ್ಪಗಳನ್ನು ಸಮರ್ಪಿಸಿದರು. ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಪೂಜಾ ಕೈಂಕರ್ಯ ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಕುಳಮರ್ವ ಶ್ಯಾಮ ಪ್ರಸಾದ್ ಅವರು ಶಂಕರ ಪಂಚಮಿಯ ಬಗ್ಗೆ, ಶ್ರೀ ಶಂಕರಾಚಾರ್ಯರ ಅಧ್ವೈತ ಸಿದ್ಧಾಂತದ ಬಗ್ಗೆ ಮತ್ತು ಪಂಚಾಯತನ ಪೂಜಾ ವಿಧಿವಿಧಾನಗಳ ಮಹತ್ವಗಳನ್ನು ವಿವರಿಸಿದರು. ಪೆರಡಾಲ ವಲಯ ಅಧ್ಯಕ್ಷ ಶ್ರೀಹರಿ ಪೆರ್ಮುಖ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.