ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಇಂದಿಗೆ (ಸೋಮವಾರ) ಎರಡನೇ ದಿನಕ್ಕೆ ಕಾಲಿಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕರು ಮತ್ತು ಭಧ್ರತಾ ಪಡೆಗಳೊಂದಿಗೆ ಭಾರಿ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಸನ್ಯಾಲ್ ಗ್ರಾಮದಲ್ಲಿ ಕಾರ್ಯಾಚರಣೆ ಮುಂದುವರಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿರಾನಗರ್ ವಲಯದಲ್ಲಿ ಅಂತರರಾಷ್ಟ್ರೀಯ ಗಡಿಯ ಬಳಿ ಸನ್ಯಾಲ್ ಗ್ರಾಮದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯವನ್ನು ಭಾನುವಾರ ಆರಂಭಿಸಿದ್ದವು. ಈ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಏಳು ವರ್ಷ ವಯಸ್ಸಿನ ಬಾಲಕಿಯೊಬ್ಬಳಿಗೆ ಗಾಯಗಳಾಗಿವೆ. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದರು.