ನಾಗರಕರ್ನೂಲ್: ಶ್ರೀಶೈಲಂ ಎಡದಂಡೆ ಕಾಲುವೆ(ಎಸ್‌ಎಲ್‌ಬಿಸಿ) ಕುಸಿದು, ಸುರಂಗದಡಿ ಸಿಲುಕಿರುವ 7 ಮಂದಿ ಕಾರ್ಮಿಕರ ಪತ್ತೆಗಾಗಿ 2 ವಾರಗಳಿಗೂ ಹೆಚ್ಚು ಕಾಲ ಶೋಧ ನಡೆಸುತ್ತಿದ್ದ ರಕ್ಷಣಾ ತಂಡಗಳ ಕಾರ್ಯಾಚರಣೆಗೆ ಇಂದು (ಮಂಗಳವಾರ) ರೋಬೊಗಳು ಸಾಥ್ ನೀಡಿವೆ.
ರಕ್ಷಣಾ ತಂಡಗಳು ನಿನ್ನೆ (ಸೋಮವಾರ) ಓರ್ವ ಕಾರ್ಮಿಕನ ಮೃತದೇಹ ಪತ್ತೆ ಹಚ್ಚಿವೆ.
ಹೈದರಾಬಾದ್ ಮೂಲದ ರೊಬೊಟಿಕ್ಸ್ ಕಂಪನಿಯ ತಂಡವೊಂದು ಇಂದು ಬೆಳಿಗ್ಗೆ ರೋಬೊಗಳೊಂದಿಗೆ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯಂತ್ರದಿಂದ ಸುರಂಗವನ್ನು ಕೊರೆಯುವ ಕಾರ್ಯಾಚರಣೆಯಲ್ಲಿ ರಕ್ಷಣಾ ಸಿಬ್ಬಂದಿ ಅಪಾಯಕ್ಕೆ ಒಳಗಾಗುವ ಕಾರಣ ರೋಬೊಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾರ್ಮಿಕರ ಪತ್ತೆಗಾಗಿ ಶ್ವಾನದಳವನ್ನು ಬಳಸಲಾಯಿತು. ಕೇರಳ ಪೊಲೀಸ್ ಇಲಾಖೆಯಲ್ಲಿನ ಬೆಲ್ಜಿಯನ್ ಮಲಿನೋಸ್ ಜಾತಿಯ ನಾಯಿಗಳು ಸುಮಾರು 15 ಅಡಿ ಆಳದಲ್ಲಿನ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅವುಗಳು ಗುರುತಿಸುವ ಸ್ಥಳಗಳಲ್ಲಿ ಗುಂಡಿ ತೋಡಲಾಗುತ್ತಿದೆ. ಸದ್ಯ ಒಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದ ಕಾರ್ಮಿಕರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುರಂಗ ಇರುವ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ ಉತ್ತಮ್ ಕುಮಾರ್, 'ರೋಬೊ ತಜ್ಞರ ನೆರವಿನೊಂದಿಗೆ (ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದರ) ರಕ್ಷಣಾ ಕಾರ್ಯಾಚರಣೆ ನಡೆಸಲು ಸರ್ಕಾರವು ₹4 ಕೋಟಿ ಖರ್ಚು ಮಾಡಲಿದೆ' ಎಂದು ಇತ್ತೀಚೆಗೆ ತಿಳಿಸಿದ್ದರು.
ಫೆಬ್ರುವರಿ 22ರಂದು ಶ್ರೀಶೈಲಂ ಎಡದಂಡೆ ಕಾಲುವೆ ಯೋಜನೆಯ ಸುರಂಗದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಸುಮಾರು 8 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದರು.