ಮಂಜೇಶ್ವರ: ಭಾರತೀಯ ಕಿಸಾನ್ ಸಂಘದ ವತಿಯಿಂದ ಕೃಷಿ ನವೋತ್ಥಾನ ಯಾತ್ರೆ 2025 ಏಪ್ರಿಲ್ 2 ರಿಂದ 28 ರ ವರೆಗೆ ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಅವರ ಸ್ಮಾರಕದಿಂದ ಆರಂಭಿಸಿ ತಿರುವನಂತಪುರದವರಿಗೆ ಮುಂದುವರೆಯಲಿರುವುದು. ಏಪ್ರಿಲ್ ಎರಡರಂದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಪ್ರತಿಮೆಗೆ ಪುಷ್ಪಾರ್ಚನೆಗೈದು ಆರಂಭಿಸುವ ಕೃಷಿ ನವೋತ್ಥಾನ ಯಾತ್ರೆಯು ಕಾಸರಗೋಡು ಜಿಲ್ಲೆಯಲ್ಲಿ ಎರಡು ದಿನ ಸಂಚರಿಸಿ ಕಣ್ಣೂರ್ ಜಿಲ್ಲೆಯನ್ನು ಸೇರಲಿರುವುದು. ಕೃಷಿಕರ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ನಡೆಯುವ ಈ ಕೃಷಿ ಯಾತ್ರೆಯಲ್ಲಿ ಜಿಲ್ಲೆಯ ಎಲ್ಲಾ ಕೃಷಿಕರು ಭಾಗವಹಿಸಬೇಕೆಂದು ಕಿಸಾನ್ ಸಂಘ ವಿನಂತಿಸಿದೆ.
ಯಾತ್ರೆಯ ನೇತೃತ್ವವನ್ನು ಕೇರಳದ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಡಾ ಅನಿಲ್ ವೈದ್ಯಮಂಗಲಮ್ ವಹಿಸಲಿದ್ದಾರೆ. ಯಾತ್ರೆಯಲ್ಲಿ ಸುಮಾರು 40 ಮಂದಿ ಒಂದು ತಿಂಗಳ ಪರಿ ಯಂತ ಕೇರಳದ ಎಲ್ಲಾ ಜಿಲ್ಲೆಯಲ್ಲಿ ಕೃಷಿಕರನ್ನು ಸಂಘಟನೆಯ ಕಡೆಗೆ ಆಕರ್ಷಿಸಲಿದ್ದಾರೆ. ಈ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದಾರೆ.
ಏಪ್ರಿಲ್ 2 ರಂದು ಬೆಳಿಗ್ಗೆ 9ಕ್ಕೆ ಮೆರವಣಿಗೆ ಆಗಮಿಸಿ ಮಂಜೇಶ್ವರದ ಶ್ರೀ ಅನಂತೇಶ್ವರ ದೇವಸ್ಥಾನದ ಪರಿಸರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಬಳಿಕ ಮೀಯಪದವಿನಲ್ಲಿ 11 ಗಂಟೆಗೆ, ಪೆರ್ಮುದೆಯಲ್ಲಿ 12 ಗಂಟೆಗೆ, ಪೆರ್ಲ ಪೇಟೆಯಲ್ಲಿ ಅಪರಾಹ್ನ 3:ಕ್ಕೆ, ಬದಿಯಡ್ಕ ಪೇಟೆಯಲ್ಲಿ ಸಂಜೆ 4ಕ್ಕೆ, ಮುಳ್ಳೇರಿಯ ಪೇಟೆಯಲ್ಲಿ 6:ಕ್ಕೆ ನಡೆದು ದಿನದ ಸಮಾಪ್ತಿ ನಡೆಯಲಿದೆ. ಏ.3 ರಂದು ಅಡೂರು ಪೇಟೆಯಲ್ಲಿ ಬೆಳಿಗ್ಗೆ 9ಕ್ಕೆ, ಬಂದಡ್ಕ ಪೇಟೆಯಲ್ಲಿ 11 ಕ್ಕೆ, ಕುತ್ತಿಕೋಲ್ ಪೇಟೆಯಲ್ಲಿ 12 ಕ್ಕೆ, ಮಾವುಂಗಾಲ್ ಪೇಟೆಯಲ್ಲಿ ಅಪರಾಹ್ನ 3.30ಕ್ಕೆ, ಸಂಜೆ 6 ಕ್ಕೆ ನೀಲೇಶ್ವರ ಪೇಟೆಯಲ್ಲಿ ಆ ದಿನದ ಕಾರ್ಯಕ್ರಮ ಕೊನೆಗೊಳ್ಳುವುದು. ಎಲ್ಲಾ ಕೇಂದ್ರಗಳಲ್ಲಿಯೂ ಕೃಷಿಕರನ್ನು ಗುರುತಿಸಿ ಗೌರವಿಸಲಾಗುವುದು. ಏ.4 ರಂದು ಕಣ್ಣೂರು ಜಿಲ್ಲೆಯಲ್ಲಿ ಯಾತ್ರೆ ಮುಂದುವರಿಯುವುದು ಎಂದು ಕಿಸಾನ್ ಸಂಘ ತಿಳಿಸಿದೆ.