ಪಟ್ನಾ: ಬಿಹಾರದಲ್ಲಿ ಇತ್ತೀಚೆಗೆ ವಿವಾಹವಾದ ಮಹಿಳೆಯೊಬ್ಬರು, 'ಪತಿಗೆ ವಿಚ್ಛೇದನ ನೀಡಲು ಸಿದ್ಧ, ಆದರೆ ಇನ್‌ಸ್ಟಾಗ್ರಾಂ ಬಳಕೆ ಮಾತ್ರ ನಿಲ್ಲಿಸುವುದಿಲ್ಲ' ಎಂದು ಹೇಳಿದ್ದಾರೆ.
ಪೂರ್ಣಿಯಾ ಜಿಲ್ಲೆಯ ಯುವಕನೊಬ್ಬ, 'ಪತ್ನಿ ದಿನವಿಡೀ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಮುಳುಗಿರುತ್ತಾರೆ.
ವಿವಿಧ ಭಂಗಿಯ ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ' ಎಂದು ದೂರು ನೀಡಿದ್ದಾರೆ.
ಇದೇ ವಿಷಯವಾಗಿ ಪತಿ-ಪತ್ನಿ ಮಧ್ಯೆ ವ್ಯಾಜ್ಯವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ, ಮಹಿಳೆ ತವರು ಮನೆಗೆ ತೆರಳಿದರು. ಗಂಡನ ಮನೆಗೆ ವಾಪಸ್ ಬರಲು ಅವರು ನಿರಾಕರಿಸುತ್ತಿದ್ದಾರೆ.
ಪತಿ ನೀಡಿದ ದೂರಿನ ಆಧಾರದಲ್ಲಿ ಸ್ಥಳೀಯ ಪೊಲೀಸ್ ಸಲಹಾ ಮಂಡಳಿಯು ದಂಪತಿಯನ್ನು ವಿಚಾರಣೆಗೆ ಕರೆದಿತ್ತು. ಈ ಸಂದರ್ಭದಲ್ಲಿ ಮಹಿಳೆ, ಅಧಿಕಾರಿಗಳ ಎದುರೇ ಪತಿಯ ಜತೆ ವಾಗ್ವಾದ ನಡೆಸಿದರು. 'ಬೇರೊಬ್ಬರ ಜೊತೆ ಸಂಬಂಧ ಇದೆ' ಎಂಬ ಆರೋಪವನ್ನು ಅಲ್ಲಗಳೆದರು. ನಂತರ, 'ಪತಿಯನ್ನು ಬೇಕಾದರೆ ಬಿಡುತ್ತೇನೆ. ಆದರೆ, ಸಾಮಾಜಿಕ ಮಾಧ್ಯಮದ ಬಳಕೆ ಬಿಡುವುದಿಲ್ಲ' ಎಂದು ಹೇಳಿದರು.