ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಪ್ರಾಥಮಿಕ ವಿದ್ಯಾರ್ಥಿಗಳ ಆಹಾರೋತ್ಸವ ಬುಧವಾರ ಜರಗಿತು. ವಿಧವಿಧ ತಿಂಡಿಗಳು, ಹಣ್ಣುಹಂಪಲು, ಸಿಹಿತಿಂಡಿಗಳು, ಕರಿದ ತಿಂಡಿಗಳು, ಪ್ರಾದೇಶಿಕ ತಿಂಡಿ ತಿನಸುಗಳ ಪ್ರದರ್ಶನ ಗಮನಸೆಳೆಯಿತು. ನಿವೃತ್ತ ಅಧ್ಯಾಪಕ ಉಪ್ಪಂಗಳ ಭಸ್ಮಾಜೆ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿ ಮಾತನಾಡಿ, ದಿನನಿತ್ಯದ ಪಾಠಪುಸ್ತಕಗಳೊಂದಿಗೆ ಹೊರಳಾಡುವ ಮಕ್ಕಳಿಗೆ ಇವತ್ತಿನ ಈ ಒಂದು ಕಾರ್ಯಕ್ರಮ ಹೊಸಲೋಕವನ್ನೇ ಸೃಷ್ಟಿಸಿದಂತಾಗಿದೆ. ಮಕ್ಕಳಿಗೆ ಸಹಜವಾಗಿ ತಿಂಡಿತಿನಿಸುಗಳ ಬಗ್ಗೆ ಒಲವು ಅಧಿಕವಿರುತ್ತದೆ. ಮನೆಯವರ ಸಹಾಯದೊಂದಿಗೆ ತಯಾರು ಮಾಡಿದಂತ ತಿಂಡಿ ತಿನಿಸುಗಳನ್ನು ತನ್ನ ಶಾಲೆಯಲ್ಲಿ ಎಲ್ಲರ ಜೊತೆ ಹಂಚಿ ತಿನ್ನುವ ಆನಂದ ಅನಿರ್ವಚನೀಯ. ಇಂತಹ ಕಾರ್ಯಕ್ರಮ ಆಯೋಜಿಸುವುದಕ್ಕೂ ಕಷ್ಟವಿದೆ. ಇಲ್ಲಿಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಎಲ್ಲ ಅಧ್ಯಾಪಕರೂ ಮಕ್ಕಳ ಮನಸ್ಸನ್ನು ಅರಳಿಸುವ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಒಬ್ಬ ಅಧ್ಯಾಪಕನಾಗಿ ನನಗೆ ಸಂತಸವನ್ನುಂಟುಮಾಡಿದೆ ಎಂದರು.
ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಮಾತನಾಡಿ, ವಾರ್ಷಿಕ ಪರೀಕ್ಷೆಯ ಜಂಜಾಟದಲ್ಲಿರುವ ಮಕ್ಕಳನ್ನು ಕಲಿಕಾ ತಂತ್ರಗಳಿಗೆ ಒಳಪಡುವಂತೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಆರೋಗ್ಯಪೂರ್ಣ ಆಹಾರಗಳನ್ನೇ ಬಳಸಿರುವುದು ಇಲ್ಲಿ ಕಂಡುಬರುತ್ತದೆ ಎಂದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಹಾಗೂ ಶಿಕ್ಷಕ ವೃಂದದ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ಹಣ್ಣುಹಂಪಲುಗಳನ್ನೆಲ್ಲ ಪಾಲಕರ ಸಹಕಾರದೊಂದಿಗೆ ಸಂಸ್ಕರಿಸಿ ಎಲ್ಲರಿಗೂ ಉಣಬಡಿಸಲಾಯಿತು.
ಆಹಾರ ಮೇಳದಲ್ಲಿ :
ಲಡ್ಡು, ಕೇಸರಿಬಾತ್, ಹಲ್ವಾ, ತೆಂಗಿನಕಾಯಿ ಬರ್ಫಿ, ರಾಗಿ ಹಲ್ವಾ, ಖರ್ಜೂರ ಹಲ್ವಾ ಮುಂತಾದ 40 ಬಗೆಯ ಸಿಹಿತಿನಿಸುಗಳು ಹಾಗೂ 34 ವಿವಿಧ ಬಗೆಯ ಕರಿದ ಖಾದ್ಯಗಳು, ಬೆಂಕಿಯನ್ನು ಬಳಸದೆ ಸ್ವತಃ ಮಕ್ಕಳೇ ತಯಾರಿಸಿದ ತರಕಾರಿ ಸಲಾಡ್, ಮೊಳಕೆ ಬರಿಸಿದ ಕಾಳುಗಳ ಸಲಾಡ್, ಚುರುಮುರಿ ಮುಂತಾದ 12 ವಿಧದ ತಿನಿಸುಗಳು. ಉಣ್ಣಿ ಅಪ್ಪ, ಚಪಾತಿ, ಪೂರಿ, ಮುಂತಾದ ತರ ತರದ 10 ತಿನಿಸುಗಳು ಹೀಗೆ ಒಟ್ಟಾಗಿ 96 ತಿನಿಸುಗಳು ಪ್ರದರ್ಶನಗೊಂಡಿತು.