ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಒವೈಸಿ, 'ಈ ವಿವಾದಾತ್ಮಕ ಮಸೂದೆಯನ್ನು ಬೆಂಬಲಿಸಿದರೆ ಎನ್‌ಡಿಎ ಮೈತ್ರಿಕೂಟದ ಟಿಡಿಪಿ, ಜೆಡಿ(ಯು) ಮತ್ತು ಎಲ್‌ಜೆಪಿಯನ್ನು(ರಾಮ್‌ವಿಲಾಸ್) ಮುಸ್ಲಿಮರು ಕ್ಷಮಿಸುವುದಿಲ್ಲ' ಎಂದು ಹೇಳಿದರು.
'ವಕ್ಫ್ ಆಸ್ತಿಯನ್ನು ರಕ್ಷಿಸುವುದು ಈ ಮಸೂದೆಯ ಉದ್ದೇಶವಲ್ಲ ಬದಲಾಗಿ ಮಂದಿರ-ಮಸೀದಿಗಾಗಿ ಜನರ ನಡುವೆ ಗಲಭೆಯನ್ನು ಸೃಷ್ಟಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ' ಎಂದು ಹೇಳಿದರು.
ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇರುವುದರಿಂದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ. ಮಸೂದೆಗೆ ಸಂಬಂಧಿಸಿದ ವರದಿಯನ್ನು ಜಂಟಿ ಸಂಸದೀಯ ಸಮಿತಿ ಕಳೆದ ತಿಂಗಳು ಸಂಸತ್ತಿನಲ್ಲಿ ಮಂಡಿಸಿತ್ತು. ಸಮಿತಿಯು ಸೂಚಿಸಿರುವ ತಿದ್ದುಪಡಿಗಳೊಂದಿಗೆ ಪರಿಷ್ಕೃತಗೊಂಡಿರುವ ಮಸೂದೆಯನ್ನು ಸಚಿವ ಸಂಪುಟ ಅಂಗೀಕರಿಸಿದೆ ಎಂದು ತಿಳಿದು ಬಂದಿದೆ.
ವಕ್ಫ್ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ವ್ಯಕ್ತಿಯೊಬ್ಬರು ಭಿತ್ತಿಪತ್ರವನ್ನು ಪ್ರದರ್ಶಿಸಿದರು