ನವದೆಹಲಿ: ಮಸೂದೆಯೊಂದಕ್ಕೆ ಸಂಬಂಧಿಸಿ ರಾಜ್ಯಸಭೆಯಲ್ಲಿ ಉತ್ತರ ನೀಡುವ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಗ್ಗೆ ಆಧಾರರಹಿತ ಆರೋಪ ಮಾಡುವ ಮೂಲಕ ಹಕ್ಕುಚ್ಯುತಿ ಮಾಡಿದ ಆರೋಪದಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಬುಧವಾರ ನೋಟಿಸ್ ನೀಡಿದ್ದಾರೆ.
'ಕಾಂಗ್ರೆಸ್ ಆಡಳಿತದಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಯು ಒಂದು ಕುಟುಂಬದ ನಿಯಂತ್ರಣದಲ್ಲಿತ್ತು. ಕಾಂಗ್ರೆಸ್ ಅಧ್ಯಕ್ಷರು ಸರ್ಕಾರಿ ನಿಧಿಯ ಸದಸ್ಯರಾಗಿದ್ದರು. ಅವರು ಸರ್ಕಾರಕ್ಕೆ ಏನೆಂದು ಉತ್ತರ ಕೊಡಲು ಸಾಧ್ಯವಿತ್ತು' ಎಂದು ಶಾ ಹೇಳಿರುವುದಾಗಿ ಜೈರಾಮ್ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ಶಾ ಅವರು ತಮ್ಮ ಹೇಳಿಕೆಯಲ್ಲಿ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ಅವರ ಹೆಸರನ್ನು ನೇರವಾಗಿ ಉಲ್ಲೇಖ ಮಾಡದಿದ್ದರೂ, ಪ್ರಧಾನ ಮಂತ್ರಿ ಪರಿಹಾರ ನಿಧಿಯಲ್ಲಿ ಸೋನಿಯಾ ಹಸ್ತಕ್ಷೇಪ ಮಾಡಿದ್ದಾರೆಂದು ಸೂಚ್ಯವಾಗಿ ಆರೋಪಿಸಿದ್ದಾರೆ. ಸದನದ ಸದಸ್ಯರೊಬ್ಬರ ಬಗ್ಗೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ' ಎಂದು ಜೈರಾಮ್ ಹೇಳಿದ್ದಾರೆ.
ಸೋನಿಯಾ ಅವರ ವಿರುದ್ಧ ಆಧಾರರಹಿತ ಆರೋಪ ಮಾಡುವ ಮೂಲಕ ಅವರ ಹಕ್ಕುಗಳ ಉಲ್ಲಂಘನೆ ಮಾಡಿದ ಮತ್ತು ಸದನದ ಘನತೆಗೆ ಧಕ್ಕೆ ತಂದ ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಉಲ್ಲೇಖಿಸಿರುವ ನೋಟಿಸ್ ಅನ್ನು ಜೈರಾಮ್ ಅವರು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರಿಗೆ ಸಲ್ಲಿಸಿದ್ದಾರೆ.
ಸೋನಿಯಾ ಗಾಂಧಿ
'ಮಾತೃತ್ವ ಯೋಜನಗೆ ಅನುದಾನ ಕೊರತೆ'
ಗರ್ಭಿಣಿಯರಿಗೆ ವಿಶೇಷ ಸವಲತ್ತು ನೀಡುವ ಯೋಜನೆಗೆ ಸರ್ಕಾರವು ಕಡಿಮೆ ಅನುದಾನವನ್ನು ನೀಡುತ್ತಿದ್ದು ಇದರಿಂದ ಫಲಾನುಭವಿಗಳ ಸಂಖ್ಯೆ ಕುಸಿಯುತ್ತಿದೆ ಎಂದು ರಾಜ್ಯಸಭೆಯ ಸದಸ್ಯೆ ಸೋನಿಯಾ ಗಾಂಧಿ ಅವರು ಬುಧವಾರ ಹೇಳಿದರು. ರಾಜ್ಯಸಭೆಯ ಶೂನ್ಯ ಅವಧಿಯಲ್ಲಿ ಮಾತನಾಡಿದ ಅವರು 'ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ(ಪಿಎಂಎಂವಿವೈ) ಫಲಾನುಭವಿಗಳ ಸಂಖ್ಯೆ ಕುಸಿತವಾಗಲು ಸರ್ಕಾರ ಯಾಕೆ ಅವಕಾಶ ನೀಡುತ್ತಿದೆ' ಎಂದು ಪ್ರಶ್ನಿಸಿದರು. 2022-23 ಸಾಲಿನ ವಿಶ್ಲೇಷಣೆಯ ಪ್ರಕಾರ ಶೇಕಡ 68ರಷ್ಟು ಗರ್ಭಿಣಿಯರು ಪಿಎಂಎಂವಿವೈನ ಮೊದಲನೇ ಕಂತನ್ನು ಪಡೆದಿದ್ದರು ಆದರೆ ನಂತರದ ವರ್ಷದಲ್ಲಿ ಈ ಪ್ರಮಾಣವು ಶೇಕಡ 12ಕ್ಕೆ ಕುಸಿದಿದೆ' ಎಂದು ಸೋನಿಯಾ ಹೇಳಿದರು.