ನವದೆಹಲಿ: ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಆರ್‌ಪಿಒ) ಅವರನ್ನು ಗುರಿಯಾಗಿಸಿ ಪಾಕಿಸ್ತಾನದ ಕೆಲವು 'ಎಕ್ಸ್' ಬಳಕೆದಾರರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಬೆಂಗಳೂರಿನ ಆರ್‌ಪಿಒ ಅಜಿತ್ ಜಾನ್ ಜೋಶುವಾ ಅವರು ಭಾರತದ ಗುಪ್ತಚರ ಸಂಸ್ಥೆ 'ರಿಸರ್ಚ್ ಆಯಂಡ್ ಅನಲಿಸಿಸ್ ವಿಂಗ್'ಗೆ (ರಾ) ಕೆಲಸ ಮಾಡುತ್ತಿದ್ದಾರೆ.
ಬಲೂಚಿಸ್ತಾನದಲ್ಲಿ ರೈಲಿನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಅವರ ಕೈವಾಡವಿದೆ ಎಂದು ಕೆಲವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಉಗ್ರಗಾಮಿ ಸಂಘಟನೆಯಾದ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲು ಅವರು ಇರಾನ್‌ಗೂ ಭೇಟಿ ನೀಡಿದ್ದಾರೆ ಎಂದು ಕೆಲವು ಪೋಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವ ಪೋಸ್ಟ್‌ಗಳನ್ನು ಭಾರತವು ಗುರುತಿಸಿದೆ. 'ಅಜಿತ್ ಜಾನ್ ಜೋಶುವಾ ಅವರು ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಆಗಿದ್ದಾರೆ. ಅವರಿಗೆ ಸಂಬಂಧಿಸಿದ ಈ ಕೆಳಗಿನ ಟ್ವೀಟ್‌ಗಳು ನಕಲಿ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.