ಸಂಭಲ್: ಶಾಹಿ ಜಾಮಾ ಮಸೀದಿಯ ಆವರಣದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಲಿಲ್ಲ ಎಂದು ಸಂಭಲ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಚೇರಿ ಎದುರು ಹಿಂದೂ ಮಹಾಸಭಾ ಸದಸ್ಯರು ಶುಕ್ರವಾರ ಹವನ ಮಾಡಿ, ಪ್ರತಿಭಟನೆ ವ್ಯಕ್ತಪಡಿಸಿದರು.
ಕಳೆದ ವರ್ಷ ನವೆಂಬರ್ 24ರಂದು ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆದಾಗ ಗಲಭೆ ಉಂಟಾಗಿತ್ತು.
ನಾಲ್ವರು ಹತ್ಯೆಗೊಳಗಾಗಿದ್ದು, ಅನೇಕರಿಗೆ ಗಾಯಗಳಾಗಿದ್ದವು. ಆನಂತರ ಸಂಭಲ್‌ನಲ್ಲಿ ಪ್ರಕ್ಷುಬ್ಧ ವಾತಾವರಣವಿದೆ.
ಮಾರ್ಚ್ 14ರಂದು ಹೋಳಿ ಹಬ್ಬವಿದೆ. ಅದೇ ದಿನ ಮುಸ್ಲಿಮರು ರಂಜಾನ್ ಹಬ್ಬದ ಮೊದಲ ಪ್ರಾರ್ಥನೆಯನ್ನು ಸಲ್ಲಿಸುವರು. ಈ ಸಂದರ್ಭದಲ್ಲಿ ಸಂಭಲ್‌ಗೆ ಹೆಚ್ಚಿನ ಭದ್ರತೆ ಒದಗಿಸಲು ಪ್ರಾಂತೀಯ ಸಶಕ್ತ ಪಡೆ (ಪಿಎಸಿ)ಯ ಏಳು ತುಕಡಿಗಳನ್ನು ನಿಯೋಜಿಸಲಾಗಿದೆ.
ಮಾರ್ಚ್ 14ರಂದು ಮಧ್ಯಾಹ್ನ 2.30ರವರೆಗೆ ಹಿಂದೂಗಳು ಹೋಳಿ ಆಚರಿಸಬೇಕು. ಆನಂತರ ಮುಸ್ಲಿಮರು ಜುಮ್ಮಾ ನಮಾಜ್ ಮಾಡಬೇಕು ಎಂದು ಶುಕ್ರವಾರ ಸ್ಥಳೀಯ ಆಡಳಿತವು ಆದೇಶಿಸಿದೆ.
'ದೆಹಲಿಯಿಂದ ಬಂದ ಹಿಂದೂ ಮಹಾಸಭಾದ ಕೆಲವರು ಮಸೀದಿಯ ಆವರಣದಲ್ಲಿ ಹವನ, ಪೂಜೆ, ಅರ್ಚನೆ ಮಾಡಲು ಅನುಮತಿ ಕೋರಿದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ' ಎಂದು ಎಸ್‌ಡಿಎಂ ವಂದನಾ ಮಿಶ್ರಾ ಹೇಳಿದರು.
ಅನುಮತಿ ನಿರಾಕರಿಸಿದ್ದರಿಂದ ಹಿಂದೂ ಮಹಾಸಭಾದವರು ಎಸ್‌ಡಿಎಂ ಕಚೇರಿ ಎದುರು ಹವನ ಮಾಡಿ, ಅದನ್ನು 'ದೇವಭೂಮಿ'ಯೆಂದು ಕರೆದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ಮಸೀದಿ ಇರುವ ಸ್ಥಳದಲ್ಲಿ ದೇವಸ್ಥಾನವಿತ್ತು. ಅಲ್ಲಿ ಯಜ್ಞ ಮಾಡಲೆಂದು ಬಂದೆವು. ಎಸ್‌ಡಿಎಂ ಬಳಿ ನಮ್ಮನ್ನು ತಡೆದರು. ಭದ್ರತಾ ಪಡೆಯವರು ಸುತ್ತುವರಿದರು' ಎಂದು ಹಿಂದೂ ಮಹಾಸಭಾದ ಸತೀಶ್ ಅಗರ್ವಾಲ್ ಪ್ರತಿಕ್ರಿಯಿಸಿದರು.