ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶಿಷ್ಟ ತೆಂಗಿನ ಮರಗಳ ಸಂರಕ್ಷಣೆ ಮತ್ತು ವಿಸ್ತರಣೆಗಾಗಿ ಬೇಡಡ್ಕ ಗ್ರಾಮ ಪಂಚಾಯಿತಿ, ಕಾರಡ್ಕ ಬ್ಲಾಕ್ ಮತ್ತು ಕಾಸರಗೋಡು ಜಿಲ್ಲಾ ಪಂಚಾಯಿತಿ ಕಳೆದ ಹಲವು ವರ್ಷಗಳಿಂದ ಜಂಟಿಯಾಗಿ ಆಯೋಜಿಸಿದ ಯೋಜನೆಯೊಂದು ಕಾರ್ಯರೂಪಕ್ಕೆ ಬರಲಾರಂಭಿಸಿದೆ.
ಬೇಡಡ್ಕದ ತೆಂಗಿನ ಸಸಿಗಳು ಹೊಂದಿರುವ ಗುಣಮಟ್ಟದಿಂದ ಇತರ ಜಿಲ್ಲೆಗಳಲ್ಲೂ ಹೆಚ್ಚಿನ ಬೇಡಿಕೆಯಿರಿಸಿಕೊಂಡಿದ್ದು, ಇದುವರೆಗೆ 3500ಕ್ಕೂ ಹೆಚ್ಚಿನ ಸಸಿಗಳು ಇತರ ಜಿಲ್ಲೆಗಳಿಗೆ ರವಾನೆಯಾಗಿದೆ. ಬೀಜದ ತೆಂಗಿನಕಾಯಿಗಳ ಸಂಗ್ರಹ, ತೆಂಗಿನ ಸಸಿಗಳ ತಯಾರಿ, ಅವುಗಳ ಪೋಷಣೆಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ ಗುಣಮಟ್ಟದ ತೆಂಗಿನ ಸಸಿಗಳ ಉತ್ಪಾದನೆ ಸಾಧ್ಯವಾಗುತ್ತಿದ್ದು, ಇಲ್ಲಿಂದ ವಿವಿಧ ಜಿಲ್ಲೆಗಳಿಗೆ ರವಾನಿಸಲಾಗುತ್ತದೆ. ತೆಂಗಿನ ಕೃಷಿಯಲ್ಲಿ ಮೂಲ ಅಂಶವನ್ನೊಳಗೊಂಡ, ಗುಣಮಟ್ಟದ ತೆಂಗಿನ ಸಸಿಗಳು ಸಿಗದಿರುವುದು ರೈತರ ಮುಂದಿರುವ ದೊಡ್ಡ ಸವಾಲಾಗಿದ್ದು, ಬೇಡಡ್ಕ ತಳಿ ಇದಕ್ಕೆ ಪರಿಹಾರವಾಗುವ ಸಾಧ್ಯತೆ ಕಂಡುಬರಲಾರಂಭಿಸಿದೆ.
ಕಾಸರಗೋಡಿನ ಬೇಡಡ್ಕ, ಮುನ್ನಾಡ್ ಮತ್ತು ಕೊಳತ್ತೂರು ಭಾಗದ ರೈತರು ಸಾಂಪ್ರದಾಯಿಕವಾಗಿ ತೆಂಗಿನಕಾಯಿಗಳನ್ನು ಸಂಗ್ರಹಿಸಿ ಇವುಗಳಿಂದ ಸಸಿ ತಯಾರಿಸುತ್ತಿದ್ದಾರೆ. ಹೆಚ್ಚಿನ ಇಳುವರಿ ನೀಡುವ ಈ ತಳಿಯು ಜಿಲ್ಲೆಯ ಹವಾಮಾನಕ್ಕೆ ಹೊಂದಿಕೊಂಡಿರುವುದು ಮತ್ತು ಕನಿಷ್ಠ ಕಾಳಜಿಯೊಂದಿಗೆ ಅತ್ಯುತ್ತಮ ಇಳುವರಿಯನ್ನು ನೀಡುತ್ತದೆ. ಯೋಜನೆಯ ಯಶಸ್ಸಿಗೆ ರೈತರನ್ನು ಸಿದ್ಧಪಡಿಸಲು ವಿವಿಧಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ ರೈತರನ್ನು ತೊಡಗಿಸಿಕೊಳ್ಳಲು ವಿಶೇಷ ನೋಂದಾವಣೆಯನ್ನೂ ಜಾರಿಗೊಳಿಸಲಾಗುತ್ತಿದೆ. ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಬೇಡಡ್ಕ ತೆಂಗಿನ ಬಗ್ಗೆ ಅರಿವು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಚಾರಿಟಬಲ್ ಸೊಸೈಟಿಗಳ ಕಾಯ್ದೆಯಡಿಯನ್ವಯ ರೈತರ ಗುಂಪುಗಳನ್ನು ನೋಂದಾಯಿಸಲು ಮತ್ತು ಗುಣಮಟ್ಟದ ಬೆಡಡ್ಕ ತಳಿಯ ತೆಂಗಿನಕಾಯಿಯನ್ನು ರೈತಸ್ನೇಹಿ ತಳಿಯಾಗಿ ಅಧಿಕೃತವಾಗಿ ನೋಂದಾಯಿಸಲೂ ಇಲ್ಲಿ ಕ್ರಮ ಜರುಗಿಸಲಾಗಿದೆ. ಬೀಜದ ತೆಂಗಿನಕಾಯಿಸಂಗ್ರಹಣೆ, ತೆಂಗಿನ ನಾಟಿ ಮತ್ತು ಮೊಳಕೆ ನಿರ್ವಹಣೆಯ ಚಟುವಟಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ಕೈಗೊಳ್ಳಲಾಗುತ್ತದೆ. ರೈತರಿಗಾಗಿ ಈಗಾಗಲೇ ಗುಣಮಟ್ಟದ ಬೇಡಡ್ಕ ತೆಂಗಿನ ಸಸಿಗಳನ್ನು ಸಿದ್ಧಪಡಿಸಲಾಗಿದೆ. ಹೆಚ್ಚಿನ ರೈತರು ಈ ಯೋಜನೆಯ ಸದಸ್ಯರಾಗಿದ್ದಾರೆ. ಈ ಯೋಜನೆಯು ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಲಾಭದಾಯಕ ತೆಂಗಿನ ಕೃಷಿಯನ್ನು ಉತ್ತೇಜಿಸುವ ಮೂಲಕ ತೆಂಗು ಕೃಷಿಯ ಭವಿಷ್ಯವನ್ನು ಬಲಪಡಿಸಿ, ರೈತರಲ್ಲಿ ಉತ್ತಮ ಭರವಸೆಯನ್ನು ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ರೈತ ಗುಂಪುಗಳು ಈ ಉಪಕ್ರಮವನ್ನು ಹೆಚ್ಚಿನ ರೈತರಿಗೆ ವಿಸ್ತರಿಸಲು ಮತ್ತು ಬೇಡಡ್ಕ ತೆಂಗಿನಕಾಯಿಯ ಜನಪ್ರಿಯತೆಯನ್ನು ಹೆಚ್ಚಿಸುವಲ್ಲೂ ಕ್ರಮ ಕೈಗೊಳ್ಳಲಗುತ್ತಿದೆ.