ನವದೆಹಲಿ: ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಸಂಸದೀಯ ಹೇಳಿಕೆ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಯಿತು. ಕೊನೆಗೆ ದೇಶದಲ್ಲಿ ಪ್ರಾದೇಶಿಕ ವಿಭಜನೆ ಸೃಷ್ಟಿಸಿದ್ದಕ್ಕಾಗಿ ಬಿಜೆಪಿಯನ್ನು ಟೀಕಿಸಲು ಉದ್ದೇಶಿಸಿದ್ದೇನೆಯೇ ವಿನಃ ಉಪ ಸಭಾಪತಿಯನ್ನು ಉದ್ದೇಶಿಸಿ ನಾನು ಆ ಮಾತನ್ನು ಹೇಳಲಿಲ್ಲ ಎಂದು ಹೇಳುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಿದರು.
ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆಯೇ, ಮೇಲ್ಮನೆಯು ಶಿಕ್ಷಣ ಸಚಿವಾಲಯದ ಕಾರ್ಯನಿರ್ವಹಣೆಯ ಕುರಿತು ಚರ್ಚೆಯನ್ನು ಕೈಗೆತ್ತಿಕೊಂಡಾಗ ತಮಿಳುನಾಡು ಸರ್ಕಾರದ ವಿರುದ್ಧದ ಹೇಳಿಕೆಗಾಗಿ ಸಚಿವ ಧರ್ಮೇಂದ್ರ ಪ್ರಧಾನ್ ಕ್ಷಮೆಯಾಚಿಸಬೇಕೆಂದು ಹಲವು ಪ್ರತಿಪಕ್ಷಗಳ ಸದಸ್ಯರು ಒತ್ತಾಯಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯಡಿ (NEP)ತ್ರಿಭಾಷಾ ನೀತಿಯ ಬಗ್ಗೆ ತಮಿಳುನಾಡು ಸರ್ಕಾರದ ನಿಲುವಿಗೆ ಪ್ರಧಾನ್ ಸೋಮವಾರ ವಾಗ್ದಾಳಿ ನಡೆಸಿದ್ದರು. ರಾಜಕೀಯ ಕಾರಣದಿಂದ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡುತ್ತಿದೆ ಎಂದು ಅವರು ಮಂಗಳವಾರ ಆರೋಪಿಸಿದ್ದರು,
ಉಪ ಸಭಾಪತಿ ಹರಿವಂಶ್ ಅವರು ಶಿಕ್ಷಣ ಸಚಿವಾಲಯದ ಕಾರ್ಯನಿರ್ವಹಣೆಯ ಕುರಿತು ಚರ್ಚೆಯನ್ನು ಪ್ರಾರಂಭಿಸಲು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಅವಕಾಶ ನೀಡಿದರು. ಈ ವೇಳೆ ಕ್ಷೇತ್ರ ಪುನರ್ ವಿಂಗಡಣೆ ಮತ್ತು NEP ವಿರುದ್ಧ ಕಪ್ಪು ಬಟ್ಟೆ ಧರಿಸಿ ಬಂದಿದ್ದ ಡಿಎಂಕೆ ಸದಸ್ಯರು, ಪ್ರಧಾನ್ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಗದ್ದಲದ ನಡುವೆ ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷರಿಗೆ ಬೆಳಿಗ್ಗೆಯೇ ಮಾತನಾಡಲು ಅವಕಾಶ ನೀಡಲಾಗಿದೆ ಎಂದು ಸಭಾಪತಿ ಹೇಳಿದರೂ, ಆ ಸಮಯದಲ್ಲಿ ಶಿಕ್ಷಣ ಸಚಿವರು ಸದನದಲ್ಲಿ ಇರಲಿಲ್ಲ ಎಂದು ಆರೋಪಿಸಿ,‘ಇದೊಂದು ಸರ್ವಾಧಿಕಾರ’ ಎಂದರು. ದಿಗ್ವಿಜಯ್ ಸಿಂಗ್ ಮಾತನಾಡುವ ಸರದಿ ಎಂದು ಸಭಾಪತಿ ಹೇಳುತ್ತಿದ್ದಂತೆ, ಸರ್ಕಾರವನ್ನು ಮೂಲೆಗುಂಪು ಮಾಡಲು ಪ್ರತಿಪಕ್ಷಗಳು ಸಿದ್ಧವಾಗಿವೆ ಎಂದು ಖರ್ಗೆ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ಬಳಸಿದ "ಟೋಕೆಂಗೆ" ಎಂಬ ಪದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಬಿಜೆಪಿ, "ವಿಪಕ್ಷ ನಾಯಕರು ಉಪ ಸಭಾಪತಿಗಳನ್ನು ಉದ್ದೇಶಿಸಿ ಅವಮಾನಕಾರಿ ಪದ ಬಳಿಸಿದ್ದಾರೆ.." ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ವಿರೋಧ ಪಕ್ಷದ ನಾಯಕರು ಬಳಸಿದ ಭಾಷೆ, ಪೀಠದ ಮೇಲಿನ ಆಕ್ಷೇಪಗಳು ಖಂಡನೀಯ...ಇದನ್ನು ಎಲ್ಲರೂ ಖಂಡಿಸಬೇಕು.ಸಭಾಪತಿಗೆ ಬಳಸಿರುವ ಪದಗಳು ಮತ್ತು ಭಾಷೆ ಅಕ್ಷಮ್ಯವಾಗಿದೆ, ಇನ್ನಾದರೂ ಅವರು ಕ್ಷಮೆಯಾಚಿಸಬೇಕು ಮತ್ತು ಪದವನ್ನು ಹೊರಹಾಕಬೇಕು," ಎಂದು ಅವರು ಹೇಳಿದರು.
"ನಿಮ್ಮನ್ನು ಎಲ್ಲಿ ಮತ್ತು ಹೇಗೆ ತಟ್ಟಬೇಕು ಎಂಬುದು ನಮಗೆ ಗೊತ್ತಿದೆ ಎಂಬ ಖರ್ಗೆ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಜೆಪಿ ನಡ್ಡಾ, "ಅತ್ಯಂತ ಹಿರಿಯ ಮತ್ತು ಸಂಸದೀಯ ಪ್ರಕ್ರಿಯೆಯ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಉಪ ಸಭಾಪತಿಗಳ ಬಗ್ಗೆ ಆಡಿರುವ ಮಾತುಗಳು ಅತ್ಯಂತ ಖಂಡನೀಯ.." ಎಂದು ಕಿಡಿಕಾರಿದರು.