ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಚೀನಾಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇದು, ಯೂನಸ್ ಅವರು ಮುಖ್ಯ ಸಲಹೆಗಾರರಾಗಿ ನೇಮಕವಾದ ಬಳಿಕ ಕೈಗೊಂಡ ಮೊದಲ ದ್ವಿಪಕ್ಷೀಯ ಪ್ರವಾಸವಾಗಿದೆ.
ಯೂನಸ್ ಅವರು ಬೀಜಿಂಗ್‌ಗೆ ಬುಧವಾರ ತೆರಳಿದ್ದಾರೆ.
ಪ್ರವಾಸದ ವೇಳೆ, ಚೀನಾದ ರಾಜತಾಂತ್ರಿಕರೊಂದಿಗೆ ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆಗೆ ಶುಕ್ರವಾರ ಚರ್ಚಿಸಲಿದ್ದು, ಶನಿವಾರ ಪ್ರವಾಸ ಮುಗಿಸಿ ಬಾಂಗ್ಲಾಕ್ಕೆ ಹಿಂದಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಯೂನಸ್ ಅವರು ತಮ್ಮ ಮೊದಲ ದ್ವಿಪಕ್ಷೀಯ ಪ್ರವಾಸವನ್ನು ಚೀನಾಗೆ ಕೈಗೊಂಡಿದ್ದು, ಈ ಮೂಲಕ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ' ಎಂದು ಬಾಂಗ್ಲಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮೊಹಮ್ಮದ್ ಜಶೀಂ ಉದ್ದೀನ್ ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ 2024ರ ಆಗಸ್ಟ್‌ನಲ್ಲಿ ಕ್ಷಿಪ್ರಕ್ರಾಂತಿ ನಡೆದು, ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡ ನಂತರ ಯೂನಸ್ ಅವರು ಮುಖ್ಯ ಸಲಹೆಗಾರರಾಗಿ ನೇಮಕವಾಗಿದ್ದರು.