ನವದೆಹಲಿ: 'ಭಾರತದ ಚುನಾವಣಾ ಆಯೋಗವು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ವಿಫಲಗೊಂಡ ಸಂಸ್ಥೆಯಾಗಿದೆ. ಸಂವಿಧಾನಕ್ಕೆ ಅನುಗುಣವಾಗಿ ಆಯೋಗವು ಜವಾಬ್ದಾರಿ ನಿರ್ವಹಿಸುತ್ತಿಲ್ಲ, ಹೀಗಾಗಿ, ಬಹುಸಂಖ್ಯಾತರು ಆಯೋಗದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ' ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.
'ಪಿಟಿಐ' ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಆಯೋಗದ ಮೇಲೆ ಹೋಗಿರುವ ನಂಬಿಕೆ ಮತ್ತೆ ಮೂಡುವಂತೆ ಎಷ್ಟು ಬೇಗ ಮಾಡಲಾದೀತೊ, ಅಷ್ಟು ಬೇಗ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯವಾಗಲಿದೆ' ಎಂದು ತಿಳಿಸಿದ್ದಾರೆ.
ವ್ಯವಸ್ಥಿತ ರೂಪ ಅಗತ್ಯ: 'ಬಿಜೆಪಿ ವಿರುದ್ಧ ರಚನೆಯಾಗಿರುವ ವಿರೋಧ ಪಕ್ಷಗಳ 'ಇಂಡಿಯಾ' ಒಕ್ಕೂಟಕ್ಕೆ ವ್ಯವಸ್ಥಿತ ರೂಪ ನೀಡಬೇಕಾಗಿದ್ದು, ಸಾರ್ವಜನಿಕ ಅಭಿಪ್ರಾಯ ವ್ಯಕ್ತಪಡಿಸಲು ವಕ್ತಾರರು ಬೇಕಿದೆ' ಎಂದು ಸಲಹೆ ನೀಡಿದ್ದಾರೆ.
'ಇಂಡಿಯಾ' ಒಕ್ಕೂಟವು ಸಂಘಟಿತ ನೀತಿ, ಸ್ಪಷ್ಟವಾದ ಸೈದ್ಧಾಂತಿಕ ಚೌಕಟ್ಟು, ಭವಿಷ್ಯದ ಕುರಿತು ಕಾರ್ಯಕ್ರಮಗಳನ್ನು ಹೊಂದಿರಬೇಕು' ಎಂದೂ ಹೇಳಿದ್ದಾರೆ.
ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ 'ಇಂಡಿಯಾ' ಒಕ್ಕೂಟದಲ್ಲಿದ್ದ ಪಕ್ಷಗಳೇ ಪರಸ್ಪರ ಸ್ಪರ್ಧೆ ನಡೆಸಿದ್ದು ಕೆಟ್ಟ ನಡವಳಿಕೆ. ಸಾರ್ವಜನಿಕ ವಲಯದಿಂದಲೇ 'ಇಂಡಿಯಾ' ಒಕ್ಕೂಟಕ್ಕೆ ತಡೆ (ಬ್ಲಾಕ್) ಎದುರಾಗುವ ಆತಂಕವಿದೆ. ಅದಕ್ಕೂ ಮುನ್ನ ತಾನಾಗಿಯೇ ಅದು ತಡೆ ಉಂಟಾಗದಂತೆ ಮಾಡಿಕೊಳ್ಳಬೇಕು (ಅನ್‌ಬ್ಲಾಕ್ ಮಾಡಬೇಕು) ಎಂದು ಹೇಳಿದ್ದಾರೆ.
ವಕ್ಫ್ ಕಾದು ನೋಡೋಣ: 'ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಈಗಿನ ಬಜೆಟ್ ಅಧಿವೇಶನದಲ್ಲಿಯೇ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ವಿಷಯದಲ್ಲಿ ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶವಿದೆ. ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲ. ಹೀಗಾಗಿ, ಎನ್‌ಡಿಎ ಮಿತ್ರಪಕ್ಷಗಳು ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ' ಎಂದು ತಿಳಿಸಿದರು.
ಕಪಿಲ್ ಸಿಬಲ್ ರಾಜ್ಯಸಭಾ ಸಂಸದಕ್ಷೇತ್ರ ಮರುವಿಂಗಡನೆಯಾದರೆ ದೇಶದ ಭವಿಷ್ಯದ ರಾಜಕೀಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. 20221ರಲ್ಲಿಯೂ ಜನಗಣತಿ ನಡೆದಿಲ್ಲ. ಮೊದಲು ಗಣತಿಯಾಗಲಿ ನಂತರ ಮರುವಿಂಗಡನೆಯ ಚರ್ಚೆ ಮಾಡಬಹುದು
'ನ್ಯಾಯಾಂಗದ ಮೇಲೆ ನಂಬಿಕೆ ಕ್ಷೀಣ'
'ನ್ಯಾಯಾಂಗದ ಮೇಲಿನ ಜನರ ನಂಬಿಕೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ನ್ಯಾಯಾಂಗದ ನೇಮಕಾತಿಯು ಸರಿಯಾಗಿ ಆಗುತ್ತಿಲ್ಲ. ಇದನ್ನು ಸರ್ಕಾರ ಹಾಗೂ ನ್ಯಾಯಾಂಗ ಒಪ್ಪಿಕೊಂಡಾಗ ಮಾತ್ರ ಪರ್ಯಾಯ ಅವಕಾಶಗಳು ಸೃಷ್ಟಿಯಾಗಬಹುದು' ಎಂದು ಕಪಿಲ್ ಸಿಬಲ್ ಹೇಳಿದರು. 'ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಕುರಿತು ನಮಗೆ ನಾವು ಪ್ರಶ್ನಿಸಕೊಳ್ಳಬೇಕಿದೆ. ನ್ಯಾಯಾಂಗವೂ ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕು. ಜನರ ಅಭಿಪ್ರಾಯದಲ್ಲಿಯೂ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ' ಎಂದರು.