HEALTH TIPS

ಅಪಾಯಕಾರಿ ಮನಸ್ಥಿತಿ, ರಾಷ್ಟ್ರೀಯ ಏಕತೆ ದುರ್ಬಲಗೊಳಿಸುತ್ತದೆ: ನಿರ್ಮಲಾ

ನವದೆಹಲಿ: 'ರೂಪಾಯಿ (₹) ಚಿಹ್ನೆಯನ್ನು ಬದಲಾಯಿಸುವ ತಮಿಳುನಾಡು ಸರ್ಕಾರದ ನಡೆಯು ಅಪಾಯಕಾರಿ ಮನಸ್ಥಿತಿಯನ್ನು ಸೂಚಿಸುತ್ತಿದ್ದು, ಪ್ರಾದೇಶಿಕ ಹೆಮ್ಮೆಯ ನೆಪದಲ್ಲಿ ವಿಯೋಜನೆಯ ಭಾವನೆಗಳನ್ನು ಉತ್ತೇಜಿಸುತ್ತದೆ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸುದೀರ್ಘ ಬರಹ ಹಂಚಿಕೊಂಡಿರುವ ನಿರ್ಮಲಾ, 'ಎಲ್ಲ ಚುನಾಯಿತ ಪ್ರತಿನಿಧಿಗಳು ರಾಷ್ಟ್ರ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಲು ಸಂವಿಧಾನದ ಅಡಿಯಲ್ಲಿ ಪ್ರಮಾಣ ಮಾಡುತ್ತಾರೆ. ರಾಜ್ಯ ಬಜೆಟ್‌ನಿಂದ '₹'ನಂತಹ ರಾಷ್ಟ್ರೀಯ ಚಿಹ್ನೆಯನ್ನು ತೆಗೆದು ಹಾಕುವುದು ಈ ಪ್ರತಿಜ್ಞೆಗೆ ವಿರುದ್ಧವಾಗಿದೆ. ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುತ್ತದೆ' ಎಂದು ಹೇಳಿದ್ದಾರೆ.

ಹಿಂದಿ ಹೇರಿಕೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಳವಡಿಕೆ ವಿಚಾರವಾಗಿ ಕೇಂದ್ರ ಸರ್ಕಾರದೊಡನೆ ಸಂಘರ್ಷ ನಡೆಸುತ್ತಿರುವ ತಮಿಳುನಾಡು ರಾಜ್ಯ ಸರ್ಕಾರವು, 2025-26ನೇ ಸಾಲಿನ ಬಜೆಟ್‌ನ ಪ್ರತಿಗಳಲ್ಲಿ ರೂಪಾಯಿ ಚಿಹ್ನೆ (₹) ಬಳಸಿಲ್ಲ. ಬದಲಾಗಿ, ತಮಿಳು ಅಕ್ಷರ 'ರೂ' ಎಂದು ಮುದ್ರಿಸಿತ್ತು.

'ರೂಪಾಯಿ ಚಿಹ್ನೆ ಬಗ್ಗೆ ಡಿಎಂಕೆಗೆ ಸಮಸ್ಯೆ ಇದ್ದರೆ 2010ರಲ್ಲಿ ಏಕೆ ಪ್ರತಿಭಟನೆ ನಡೆಸಿಲ್ಲ? 2010ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರವಧಿಯಲ್ಲಿ ರೂಪಾಯಿ ಚಿಹ್ನೆಯನ್ನು ಅಧಿಕೃತವಾಗಿ ಅಂಗೀಕರಿಸಲಾಗಿತ್ತು. ಅಂದು ಡಿಎಂಕೆ ಆಡಳಿತ ಮೈತ್ರಿಕೂಟದ ಭಾಗವಾಗಿತ್ತು' ಎಂದು ನಿರ್ಮಲಾ ಬೊಟ್ಟು ಮಾಡಿದ್ದಾರೆ.

'ವಿಪರ್ಯಾಸವೆಂದರೆ ರೂಪಾಯಿ ಚಿಹ್ನೆಯನ್ನು ಡಿಎಂಕೆ ಮಾಜಿ ಶಾಸಕ ಎನ್. ಧರ್ಮಲಿಂಗಂ ಅವರ ಪುತ್ರ ಟಿ.ಡಿ. ಉದಯ ಕುಮಾರ್ ವಿನ್ಯಾಸಗೊಳಿಸಿದ್ದಾರೆ. ಈಗ ಅದನ್ನು ತೆಗೆದು ಹಾಕುವ ಮೂಲಕ ಡಿಎಂಕೆ ರಾಷ್ಟ್ರೀಯ ಚಿಹ್ನೆಯನ್ನು ತಿರಸ್ಕರಿಸುವುದಲ್ಲದೆ ತಮಿಳು ಯುವಜನತೆಯ ಸೃಜನಶೀಲ ಕೊಡುಗೆಯನ್ನು ನಿರ್ಲಕ್ಷಿಸುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.

'ಇದಕ್ಕೂ ಮಿಗಿಲಾಗಿ 'Rupaai' ಎಂಬ ತಮಿಳು ಪದ ಸಂಸ್ಕೃತ ಪದವಾದ 'Rupya'ದಲ್ಲಿ ಆಳವಾದ ಬೇರನ್ನು ಹೊಂದಿದೆ. ಈ ಪದವು ಶತಮಾನಗಳಿಂದ ತಮಿಳು ವ್ಯಾಪಾರ ಹಾಗೂ ಸಾಹಿತ್ಯದಲ್ಲಿ ಪ್ರತಿನಿಧಿಸುತ್ತದೆ. ಇಂದಿಗೂ ತಮಿಳುನಾಡು ಹಾಗೂ ಶ್ರೀಲಂಕಾದಲ್ಲಿ 'Rupaai'ಕರೆನ್ಸಿ ಹೆಸರಾಗಿ ಉಳಿದಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.

'ಇಂಡೋನೇಷ್ಯಾ, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಶ್ರೀಲಂಕಾ ಸೇರಿದಂತೆ ಹಲವಾರು ದೇಶಗಳು ಅಧಿಕೃತವಾಗಿ ರೂಪಾಯಿ ಅಥವಾ ಅದಕ್ಕೆ ಸಮಾನವಾದ ಕರೆನ್ಸಿ ಹೆಸರುಗಳನ್ನು ಬಳಸುತ್ತವೆ' ಎಂದು ಅವರು ಹೇಳಿದ್ದಾರೆ.

'ರೂಪಾಯಿ ಚಿಹ್ನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ಜಾಗತಿಕ ಹಣಕಾಸು ವಹಿವಾಟುಗಳಲ್ಲಿ ಭಾರತದ ಗುರುತಾಗಿದೆ. ವಿದೇಶಗಳಲ್ಲಿ ಯುಪಿಎ ಪಾವತಿಗೆ ಭಾರತ ಉತ್ತೇಜನ ನೀಡುವ ಈ ಸಂದರ್ಭದಲ್ಲಿ ನಮ್ಮದೇ ರಾಷ್ಟ್ರೀಯ ಕರೆನ್ಸಿ ಚಿಹ್ನೆಯನ್ನು ದುರ್ಬಲಗೊಳಿಸಬೇಕೇ' ಎಂದು ಅವರು ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries