ಮುಂಬೈ: ನಾಗ್ಪುರ ಗಲಭೆಯಲ್ಲಿ ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿರುವ ಕೆಲವು ವ್ಯಕ್ತಿಗಳು ಭಾಗಿಯಾಗಿದ್ದರು ಎಂದು ಶಿವಸೇನಾ (ಶಿಂದೆ ಬಣ) ನಾಯಕ ಸಂಜಯ್ ನಿರುಪಮ್ ಭಾನುವಾರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂಸಾಚಾರವು ಪೂರ್ವಯೋಜಿತ ಮತ್ತು ದೊಡ್ಡ ಪಿತೂರಿಯ ಭಾಗ ಎಂದು ಹೇಳಿದರು.
ಗಲಭೆ ಪ್ರಕರಣದಲ್ಲಿ ಬಂಧಿಸಿರುವ ಕೆಲವರು 'ಮುಜಾಹಿದ್ದೀನ್ ಚಟುವಟಿಕೆ'ಗೆ ನಿಧಿ ಸಂಗ್ರಹಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ಶಿವಸೇನಾ (ಉದ್ಧವ್ ಬಣ) ಹಿಂದೂ ವಿರೋಧಿಯಾಗಿ ಬದಲಾಗಿದೆ. 'ಮಾತೋಶ್ರೀ'ಯಲ್ಲಿ (ಉದ್ಧವ್ ಠಾಕ್ರೆ ನಿವಾಸ) ಶೀಘ್ರವೇ ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಮತ್ತು ಶಿವಾಜಿ ಮಹಾರಾಜ ಅವರ ಫೋಟೊ ಬದಲಾಗಿ ಔರಂಗಜೇಬ್ ಫೋಟೊ ಇರಲಿದೆ ಎಂದು ಹೇಳಿದರು.
ಮೊಘಲ್ ದೊರೆ ಔರಂಗಜೇಬ್ ಸಮಾಧಿ ತೆರವಿಗೆ ಆಗ್ರಹಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಪವಿತ್ರ 'ಛಾದರ್' ಸುಟ್ಟುಹಾಕಲಾಗಿದೆ ಎಂಬ ವದಂತಿ ಹಬ್ಬಿದ ಬಳಿಕ ಮಾ.17ರಂದು ನಾಗ್ಪುರದಲ್ಲಿ ಹಿಂಸಾಚಾರ ನಡೆದಿತ್ತು. ನಗರದ ಹಲವು ಭಾಗಗಳಲ್ಲಿ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದರು, ಪೆಟ್ರೋಲ್ ಬಾಂಬ್ ಎಸೆದಿದ್ದರು. ಹಿಂಸಾಚಾರದಲ್ಲಿ 33 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಗಲಭೆಯ ನಂತರ ಹೇರಲಾಗಿದ್ದ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.