ಮುಂಬೈ: ಅಪ್ರತಿಮ ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿರಾವ್ ಪುಲೆ ಮತ್ತು ಸಾವಿತ್ರಿಬಾಯಿ ಪುಲೆ ಅವರಿಗೆ ಮರಣೋತ್ತರವಾಗಿ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮಹಾರಾಷ್ಟ್ರ ವಿಧಾನಸಭೆ ಸೋಮವಾರ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.
ಸಚಿವ ಜಯಕುಮಾರ್ ರಾವಲ್ ಅವರು ನಿರ್ಣಯವನ್ನು ಮಂಡಿಸಿದರೆ, ಎನ್‌ಸಿಪಿ ಶಾಸಕ ಛಗನ್ ಭುಜಬಲ್ ಮತ್ತು ಕಾಂಗ್ರೆಸ್‌ನ ವಿಜಯ ವಾಡೆಟಿವಾರ್ ಅವರು ನಿರ್ಣಯವನ್ನು ಬೆಂಬಲಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, 'ಮಹಾತ್ಮ ಬಿರುದು ಎಲ್ಲಕ್ಕಿಂತಲೂ ಮಿಗಿಲಾಗಿದ್ದು, ದೇಶದ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಅದು ದಕ್ಕಿದೆ. ಮಹಾತ್ಮ ಪುಲೆ ಮತ್ತು ಮಹಾತ್ಮ ಗಾಂಧಿ' ಎಂದು ಹೇಳಿದರು.
ನಿರ್ಣಯ ಅಂಗೀಕಾರವಾದ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದ ಎನ್‌ಸಿಪಿ ನಾಯಕ, ಉಪ ಮುಖ್ಯಮಂತ್ರಿ ಅಜಿತ್ ಪವಾರ್, 'ಇಂದು ಮಹಿಳೆಯರು ಕೃಷಿ, ಶಿಕ್ಷಣ, ಜ್ಞಾನ, ವಿಜ್ಞಾನ, ಸಂಶೋಧನೆ, ಬಾಹ್ಯಾಕಾಶ, ರಾಜಕೀಯ ಮತ್ತು ಸಾಮಾಜಿಕ ಸೇವೆಯಂತಹ ವಿವಿಧ ಕ್ಷೇತ್ರಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ, ರಾಷ್ಟ್ರದ ಪ್ರಗತಿಗೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ. ಇದರ ಸಂಪೂರ್ಣ ಶ್ರೇಯಸ್ಸು ಪುಲೆ ದಂಪತಿಗೆ ಸಲ್ಲಬೇಕು' ಎಂದರು.