ಮಂಜೇಶ್ವರ: ಮಲೆನಾಡು ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ ಮಂಜೇಶ್ವರದ ಕನಿಲ ಪ್ರದೇಶದಲ್ಲೂ ಸಂಚಾರ ನಡೆಸುತ್ತಿರುವ ಬಗ್ಗೆ ವದಂತಿ ಹರಡಿದ್ದು, ಇಲ್ಲಿನ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕನಿಲದಲ್ಲಿ ನವೀಕರಣಗೊಳ್ಳುತ್ತಿರುವ ಶ್ರೀ ಭಗವತೀ ಕ್ಷೇತ್ರ ವಠಾರದಲ್ಲಿ ಮೂರು ದಿವಸಗಳ ಹಿಂದೆ ಚಿರತೆ ಕಾಣಿಸಿಕೊಂಡಿರುವುದಾಗಿ ವದಂತಿ ಹರಡಿದೆ. ಈ ಪ್ರದೇಶಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆಯದ್ದೆನ್ನಲಾದ ಪಂಜದ ಗುರುತು ಪತ್ತೆಯಾಗಿರುವುದು ವದಂತಿಗೆ ಪುಷ್ಠಿ ನೀಡಿದೆ. ಆದರೆ ಹುಡುಕಾಟದ ಮಧ್ಯೆ ಚಿರತೆ ಕಂಡುಬಂದಿರಲಿಲ್ಲ.
ಈ ಮಧ್ಯೆ ಇರಿಯಣ್ಣಿ ಪ್ರದೇಶದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿನ ಬೇಪು ನಿವಾಸಿ ಉದಯನ್ ಎಂಬವರ ಮನೆ ಅಂಗಳದಲ್ಲಿದ್ದ ನಾಯಿಯನ್ನು ಹೊತ್ತೊಯ್ದಿದೆ. ಮಂಗಳವಾರ ಬೆಳಗ್ಗೆ ನಾಯಿಗಳು ಜೋರಾಗಿ ಬೊಗಳುತ್ತಿರುವುದನ್ನು ಕೇಳಿ ಎಚ್ಚೆತ್ತು ಹೊರಬರುತ್ತಿದ್ದಂತೆ ಚಿರತೆ ನಾಯಿಯನ್ನು ಕಚ್ಚಿಕೊಂಡು ತೆರಳುತ್ತಿರುವುದು ಕಂಡು ಬಂದಿತ್ತು. ಇನ್ನೊಂದು ನಾಯಿ ಗೂಡಿನೊಳಗಿದ್ದ ಕಾರಣ ಜೀವಾಪಾಯದಿಂದ ಪಾರಾಗಿದೆ.