ಟೆಹರಾನ್: ಇರಾನ್‌ಗೆ ಮಧ್ಯ ಪ್ರಾಚ್ಯದಲ್ಲಿ ಬೆಂಬಲಿಗ ಪಡೆಗಳ ಅಗತ್ಯವಿಲ್ಲ. ಟೆಹರಾನ್ ಅನ್ನು ದುರುದ್ದೇಶದಿಂದ ಕೆಣಕಿದರೆ ಪೆಟ್ಟು ತಿನ್ನಬೇಕಾಗುತ್ತದೆ ಎಂದು ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಾಗಿನಿಂದ ಮಧ್ಯಪ್ರಾಚ್ಯದಲ್ಲಿ ಭಾರಿ ಮಿಲಿಟರಿ ಕಾರ್ಯಾಚರಣೆಯನ್ನು ಉತ್ತೇಜಿಸುತ್ತಿರುವ ಡೊನಾಲ್ಡ್ ಟ್ರಂಪ್, ಯೆಮನ್‌ನ ಹೌಥಿ ಸಂಘಟನೆ ನಡೆಸುತ್ತಿರುವ ದಾಳಿಗಳಿಗೆ ಇರಾನ್ ಹೊಣೆ ಎಂದು ಸೋಮವಾರ ಆರೋಪಿಸಿದ್ದರು.
ಮಧ್ಯ ಪ್ರಾಚ್ಯದಾದ್ಯಂತ ಇಸ್ರೇಲ್ ಹಾಗೂ ಅಮೆರಿಕಕ್ಕೆ ಪ್ರತಿರೋಧ ಒಡ್ಡುತ್ತಿರುವುದಾಗಿ ಹೇಳಿಕೊಳ್ಳುವ ಗುಂಪುಗಳೊಂದಿಗೆ ಇರಾನ್ ಹಲವು ವರ್ಷಗಳಿಂದ ಹೊಂದಾಣಿಕೆ ಮಾಡಿಕೊಂಡಿದೆ. ಅದರಲ್ಲಿ, ಹಮಾಸ್, ಲೆಬನಾನ್‌ನ ಹಿಜ್ಬುಲ್ಲಾ ಮತ್ತು ಇರಾಕ್‌ನಲ್ಲಿರುವ ವಿವಿಧ ಶಿಯಾ ಸಶಸ್ತ್ರ ಗುಂಪುಗಳೂ ಸೇರಿವೆ.
ಅಮೆರಿಕ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಖಮೇನಿ, 'ಪ್ರಾದೇಶಿಕ ಪ್ರತಿರೋಧ ಪಡೆಗಳನ್ನು ಇರಾನ್‌ನ ಪ್ರಾಕ್ಸಿ (ಬೆಂಬಲಿತ ಪಡೆಗಳು) ಎಂದು ಕರೆಯುವುದು ದೊಡ್ಡ ತಪ್ಪು. ಪ್ರಾಕ್ಸಿ ಎಂದರೆ ಏನರ್ಥ?' ಎಂದು ಗುಡುಗಿದ್ದಾರೆ.
'ಯೆಮನ್ ರಾಷ್ಟ್ರವು ತನ್ನದೇ ಆದ ಪ್ರೇರಣೆಗಳನ್ನು ಹೊಂದಿದೆ. ಈ ಭಾಗದಲ್ಲಿರುವ ಪ್ರತಿರೋಧ ಗುಂಪುಗಳಿಗೂ ತಮ್ಮದೇ ಉದ್ದೇಶಗಳಿವೆ. ಪ್ರಾಕ್ಸಿಗಳ ಅಗತ್ಯ ಇರಾನ್‌ಗೆ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ಅವರು (ಅಮೆರಿಕನ್ನರು) ಬೆದರಿಕೆ ಒಡ್ಡುತ್ತಿದ್ದಾರೆ' ಎಂದಿರುವ ಖಮೇನಿ, 'ನಾವು ಯಾರೊಂದಿಗೂ ಸಂಘರ್ಷ ಆರಂಭಿಸಿಲ್ಲ. ಆದಾಗ್ಯೂ, ಯಾರಾದರೂ ದುರುದ್ದೇಶದಿಂದ ವರ್ತಿಸಿ, ಅದನ್ನು ಪ್ರಾರಂಭಿಸಿದರೆ, ಭಾರಿ ಹೊಡೆತ ತಿನ್ನುತ್ತಾರೆ' ಎಂದು ಎಚ್ಚರಿಸಿದ್ದಾರೆ.