ಜಮ್ಮು: ಗುಲ್ಮಾರ್ಗ್ ಫ್ಯಾಷನ್ ಷೋ ವಿವಾದವು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಕಲಾಪದಲ್ಲಿಯೂ ಪ್ರತಿಧ್ವನಿಸಿದ್ದು, ಒಮರ್ ಅಬ್ದುಲ್ಲಾ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.
ಸೋಮವಾರ ಕಲಾಪ ಪ್ರಾರಂಭವಾಗುತ್ತಿದ್ದಂತೆ ಫ್ಯಾಷನ್ ಷೋ ವಿಷಯ ಪ್ರಸ್ತಾಪಿದ ಪೀಪಲ್ ಡೆಮಾಕ್ರೆಟಿಕ್ ಪಕ್ಷದ ಶಾಸಕ ಮೀರ್ ಮೊಹಮ್ಮದ್ ಫಯಾಜ್, ಪವಿತ್ರ ರಂಜಾನ್ ತಿಂಗಳಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಮಾಡಿಕೊಟ್ಟಿರುವ ಬಗ್ಗೆ ತನಿಖೆಯಾಗಬೇಕು' ಎಂದು ಒತ್ತಾಯಿಸಿದರು.
ರಂಜಾನ್ ಪವಿತ್ರ ತಿಂಗಳಿನಲ್ಲಿ ಗುಲ್ಮಾರ್ಗ್‌ನ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಫ್ಯಾಷನ್ ಷೋ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಪ್ರವಾಸೋದ್ಯಮ ಪ್ರಚಾರದ ಹೆಸರಿನಲ್ಲಿ ಅಶ್ಲೀಲತೆಯನ್ನು ಸಹಿಸುವುದಿಲ್ಲ ಎಂದು ಧರ್ಮಗುರು ಮಿರ್ವೈಜ್ ಉಮರ್ ಫಾರೂಕ್ ಹೇಳಿದ್ದರು.
ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆದೇಶಿಸಿದ್ದಾರೆ.
'ಖಾಸಗಿ' ಎಂದು ನುಣುಚಿಕೊಳ್ಳುವ ಯತ್ನ ಬೇಡ: ಮೆಹಬೂಬ ಮುಫ್ತಿ
ವಿಧಾನಸಭೆ ಅಧಿವೇಶನಕ್ಕೂ ಮುನ್ನ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, 'ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ. ಅವರು ನಮ್ಮಿಂದ ಅನುಮತಿಯನ್ನೂ ಪಡೆದಿಲ್ಲ. ಕಾನೂನಿಗೆ ವಿರುದ್ಧವಾಗಿ ಏನಾದರೂ ನಡೆದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಪೀಪಲ್ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, 'ಖಾಸಗಿ ಎಂಬ ಹಣೆಪಟ್ಟಿ ಕಟ್ಟಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ' ಎಂದಿದ್ದಾರೆ.
'ಗುಲ್ಮಾರ್ಗ್ ಫ್ಯಾಷನ್ ಶೋದ ಅಶ್ಲೀಲ ಚಿತ್ರಗಳನ್ನು ಕಂಡು ತುಂಬಾ ಬೇಸರವಾಗಿದೆ. ಇಂತಹ ಘಟನೆ ರಂಜಾನ್ ತಿಂಗಳಿನಲ್ಲಿ ನಡೆದಿರುವುದು ಶೋಚನೀಯ. ನಮ್ಮ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿ ಅಶ್ಲೀಲತೆಗಳನ್ನು ಉತ್ತೇಜಿಸಲು ಖಾಸಗಿ ಹೋಟೆಲ್‌ಗಳಿಗೆ ಅನುಮತಿಸಿರುವುದು ಸರಿಯಲ್ಲ' ಎಂದು ಮುಫ್ತಿ ಹೇಳಿದ್ದಾರೆ.