ನವದೆಹಲಿ: ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ನ ಜೈರಾಮ್ ರಮೇಶ್ ಅವರು ಸಲ್ಲಿಸಿದ್ದ ಹಕ್ಕುಚ್ಯುತಿ ನೋಟಿಸ್ ಅನ್ನು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ತಿರಸ್ಕರಿಸಿದ್ದು, 'ಗೃಹಸಚಿವರ ಹೇಳಿಕೆ ಸತ್ಯಕ್ಕೆ ಬದ್ಧವಾಗಿದೆ' ಎಂದು ರೂಲಿಂಗ್ ನೀಡಿದ್ದಾರೆ.
'ಪ್ರಧಾನಮಂತ್ರಿ ಅವರ ರಾಷ್ಟ್ರೀಯ ಪರಿಹಾರ ನಿಧಿ ನಿರ್ವಹಣೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿ ಆಗಿದ್ದರು' ಎಂದು ಶಾ ಕಳೆದ ಅವರು ಹೇಳಿಕೆ ನೀಡಿದ್ದರು. 'ಇದರಿಂದ ಹಕ್ಕುಚ್ಯುತಿ ಆಗಿದೆ' ಎಂದು ಜೈರಾಮ್ ರಮೇಶ್ ಅವರು ನೋಟಿಸ್ ನೀಡಿದ್ದರು.
ಗುರುವಾರ ಈ ಕುರಿತು ರೂಲಿಂಗ್ ನೀಡಿದ ಧನಕರ್ ಅವರು, 'ಶಾ ಅವರು ತಮ್ಮ ಹೇಳಿಕೆಗೆ ಸಮರ್ಥನೆಯಾಗಿ 1948ರಲ್ಲಿ ಆಗಿನ ಸರ್ಕಾರ ನೀಡಿದ್ದ ಪತ್ರಿಕಾ ಹೇಳಿಕೆ ಉದಾಹರಿಸಿದ್ದಾರೆ. ಅವರ ಹೇಳಿಕೆ ಸತ್ಯಕ್ಕೆ ಬದ್ಧವಾಗಿದೆ' ಎಂದು ತಿಳಿಸಿದರು.
ಹಕ್ಕುಚ್ಯುತಿ ನೋಟಿಸ್ ಮಂಡಿಸಿದ್ದ ಜೈರಾಮ್ ರಮೇಶ್ ಅವರು, 'ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಇಂತಹ ಹೇಳಿಕೆ ನೀಡಿದ್ದಾರೆ. ಸಂಸದರ ವರ್ತನೆ ಬಗ್ಗೆ ಮಾರ್ಗದರ್ಶಿ ಸೂತ್ರ ನಿಗದಿಪಡಿಸಬೇಕು' ಎಂದಿದ್ದರು.
ಹೇಳಿಕೆ ಸಮರ್ಥಿಸಿದ್ದ ಗೃಹ ಸಚಿವರು, 1948ರ ಜ. 24ರಂದು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಸ್ಥಾಪನೆ ಕುರಿತು ಆಗಿನ ಸರ್ಕಾರ ನೀಡಿದ್ದ ಹೇಳಿಕೆ ಉಲ್ಲೇಖಿಸಿದರು. ನಿಧಿಯನ್ನು ಪ್ರಧಾನಮಂತ್ರಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಉಪ ಪ್ರಧಾನಿ ಮತ್ತು ಇತರೆ ಕೆಲ ಸದಸ್ಯರು ಇರುವ ಸಮಿತಿ ನಿರ್ವಹಿಸಲಿದೆ ಎಂದು ಹೇಳಿಕೆಯಲ್ಲಿತ್ತು' ಎಂದರು.