ನವದೆಹಲಿ: ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ಗೌರವ ಸಲ್ಲಿಸಿದ್ದಾರೆ.
ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಜ್ ರಾಜಗುರು ಅವರ ಪರಾಕ್ರಮ, ತ್ಯಾಗ, ಹೋರಾಟ ಮತ್ತು ಆದರ್ಶಗಳನ್ನು ಈ ದಿನ ಸ್ಮರಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ನಾಯಕರು ಇವರನ್ನು ಸ್ಮರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಣೆಯ ಫೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.
'ಇಂದು ನಮ್ಮ ದೇಶವು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಅತ್ಯುನ್ನತ ತ್ಯಾಗವನ್ನು ನೆನಪಿಸಿಕೊಳ್ಳುತ್ತದೆ. ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಅವರ ನಿರ್ಭೀತ ಹೋರಾಟ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಿದೆ' ಎಂದು ಮೋದಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಹುತಾತ್ಮರ ದಿನ'ದಂದು ಭಾರತಮಾತೆಗಾಗಿ ಪರಮ ತ್ಯಾಗ ಮಾಡಿ ಹುತಾತ್ಮರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ ವಿನಮ್ರ ನಮನಗಳನ್ನು ಸಲ್ಲಿಸುತ್ತೇನೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಬಲಿದಾನ ದಿನದಂದು ಕ್ರಾಂತಿಕಾರಿ ನಾಯಕರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಇಡೀ ದೇಶವೇ ಸ್ಮರಿಸುತ್ತಿದೆ. ಅವರ ನಿಸ್ವಾರ್ಥ ಧೈರ್ಯ ಮತ್ತು ದೇಶಭಕ್ತಿ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಬಲಿದಾನ ದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ಪಣಕ್ಕಿಟ್ಟು ಹೋರಾಡಿ, ಪ್ರಾಣಾರ್ಪಣೆ ಮಾಡಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರಿಗೆ ಗೌರವಪೂರ್ವಕ ಪ್ರಣಾಮಗಳು' ಎಂದು ಕೇಂದ್ರ ಸಚಿವ ವಿ.ಸೋಮಣ್ಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ರಿಟಿಷರಿಗೆ ದುಃಸ್ವಪ್ನವಾಗಿ ಕಾಡಿದ್ದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಮೇಲೆ ಹತ್ಯೆ ಹಾಗೂ ದೆಹಲಿಯ ಸೆಂಟ್ರಲ್ ಅಸೆಂಬ್ಲಿಗೆ ಬಾಂಬ್ ಎಸೆದ ಆರೋಪ ಇತ್ತು. 1928ರಲ್ಲಿ ಬ್ರಿಟಿಷ್ ಅಧಿಕಾರಿ ಜೆ.ಪಿ.ಸೌಂದರ್ ಅವರು ಈ ಮೂವರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದ್ದರು.
ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು 1931ರ ಮಾರ್ಚ್ 23ರಂದು ಬ್ರಿಟಿಷರು ಗಲ್ಲಿಗೇರಿಸಿದ್ದರು. ಬ್ರಿಟಿಷ್ ಅಧಿಕಾರಿಗಳೇ ಸಟ್ಲೇಜ್ ನದಿಯ ತೀರದಲ್ಲಿ ಅವರ ಅಂತ್ಯಕ್ರಿಯೆ ಮಾಡಿದ್ದರು. ಭಗತ್ ಸಿಂಗ್ ಅವರನ್ನು ಮಾರ್ಚ್ 24ರಂದು ನೇಣಿಗೆ ಹಾಕಲಾಗುವುದು ಎಂದು ಬ್ರಿಟಿಷರು ಹೇಳಿದ್ದರು. ಆದರೆ ಒಂದು ದಿನ ಮುಂಚಿತವಾಗಿ ಅವರನ್ನು ನೇಣಿಗೆ ಏರಿಸಿದ್ದರು. ಆಗ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು.