ಟೆಲ್ ಅವಿವ್ : ಗಾಜಾದ ನಾಸರ್ ಆಸ್ಪತ್ರೆಯ ಆವರಣದೊಳಗೆ ಹಮಾಸ್ ಮುಖಂಡನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಘೋಷಿಸಿವೆ.
ಎಕ್ಸ್‌ನಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿರುವ ಐಡಿಎಫ್, ಗಾಜಾದ ನಾಸರ್ ಆಸ್ಪತ್ರೆ ಆವರಣದೊಳಗಿಂದ ಕಾರ್ಯಾಚರಣೆ ನಡೆಸುತ್ತಿದ್ದ ಹಮಾಸ್‌ನ ಪ್ರಮುಖ ಭಯೋತ್ಪಾದಕನನ್ನು ನಿಖರ ದಾಳಿಯಲ್ಲಿ ಹೊಡೆದುರುಳಿಸಲಾಗಿದೆ.
ವ್ಯಾಪಕ ಗುಪ್ತಚರ ಮಾಹಿತಿ ಸಂಗ್ರಹಣಾ ಪ್ರಕ್ರಿಯೆಯ ನಂತರ ಸಾಧ್ಯವಾದಷ್ಟು ಸುತ್ತಮುತ್ತಲಿನ ಪರಿಸರದಲ್ಲಿ ಹಾನಿಯನ್ನು ತಗ್ಗಿಸುವ ಸಲುವಾಗಿ ನಿಖರವಾದ ಯುದ್ಧಸಾಮಗ್ರಿಗಳೊಂದಿಗೆ ದಾಳಿ ನಡೆಸಲಾಗಿದೆ ಎಂದು ಹೇಳಿದೆ.
ನಾಗರಿಕ ಪ್ರದೇಶಗಳನ್ನು ಹಮಾಸ್ ಉಗ್ರರು ತಮ್ಮ ರಕ್ಷಣೆಗಾಗಿ ಬಳಸುತ್ತಿದ್ದಾರೆ ಎಂದು ಮಿಲಿಟರಿ ಆರೋಪಿಸಿದೆ.
'ಗಾಜಾದ ನಾಗರಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಮೂಲಕ ಹಮಾಸ್, ಜನರನ್ನು ಕ್ರೂರವಾಗಿ ಅಪಾಯಕ್ಕೆ ಸಿಲುಕಿಸುತ್ತಿದೆ. ಕೊಲೆ, ಭಯೋತ್ಪಾದಕ ದಾಳಿಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಆಸ್ಪತ್ರೆಗಳನ್ನು ಸಕ್ರಿಯವಾಗಿ ಬಳಸುವ ಮೂಲಕ ಅಂತರರಾಷ್ಟ್ರೀಯ ಕಾನೂನಿನ ನೇರ ಉಲ್ಲಂಘನೆ ಮಾಡಿದೆ'ಎಂದು ಹೇಳಿದೆ.
ಪ್ರತ್ಯೇಕವಾಗಿ, ಹಮಾಸ್‌ನ ಇಬ್ಬರು ಪ್ರಮುಖ ಕಮಾಂಡರ್‌ಗಳನ್ನು ಕೊಂದಿರುವುದಾಗಿ ಐಡಿಎಫ್ ದೃಢಪಡಿಸಿದೆ. 'ಎಲಿಮಿನೇಟೆಡ್: ಹಮಾಸ್‌ನ ಗಾಜಾ ಬ್ರಿಗೇಡ್‌ನ ಉಪ ಕಮಾಂಡರ್ ಮತ್ತು ಹಮಾಸ್‌ನ ಶೆಜೈಯಾ ಬೆಟಾಲಿಯನ್‌ನ ಕಮಾಂಡರ್'ಎಂದು ಐಡಿಎಫ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಮೃತರನ್ನು ಹಮಾಸ್‌ನ ಕಾರ್ಯಾಚರಣೆಗಳಿಗೆ, ಆಕ್ರಮಣಕಾರಿ ತಂತ್ರವನ್ನು ಯೋಜಿಸಲು ಮತ್ತು ಅಕ್ಟೋಬರ್ 7ರಂದು ನಡೆದ ಕ್ರೂರ ಹತ್ಯಾಕಾಂಡಕ್ಕೆ ತಯಾರಿಯಲ್ಲಿ ಬ್ರಿಗೇಡ್‌ನ ಪಡೆಯನ್ನು ನಿರ್ಮಿಸುವಲ್ಲಿ ಜವಾಬ್ದಾರರಾಗಿರುವ ಅಹ್ಮದ್ ಸಲ್ಮಾನ್ ಅವ್ಜ್ ಶಿಮಾಲಿ ಮತ್ತು ಐಡಿಎಫ್ ಪಡೆಗಳ ವಿರುದ್ಧ ಬೆಟಾಲಿಯನ್‌ನ ಪಡೆಗಳನ್ನು ನಿಯೋಜಿಸಲು ಹಾಗೂ ಬೆಟಾಲಿಯನ್ ಅನ್ನು ಪುನಃಸ್ಥಾಪಿಸಲು, ಮರುಸಂಘಟಿಸಲು ಕಾರ್ಯಾಚರಣೆ ನಡೆಸಿದ ಜಮಿಲ್ ಒಮರ್ ಜಮಿಲ್ ವಾಡಿಯಾ ಎಂದು ಐಡಿಎಫ್ ಗುರುತಿಸಿದೆ.
ಇಸ್ರೇಲ್ ಕದನ ವಿರಾಮ ಪ್ರಯತ್ನಗಳನ್ನು ಹಳಿತಪ್ಪಿಸಿದೆ ಎಂಬ ಆರೋಪಗಳನ್ನು ತಿರಸ್ಕರಿಸಿರುವ ಅಮೆರಿಕ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ಹೊಸ ಆಕ್ರಮಣಕ್ಕೆ ಎಡೆಮಾಡಿದೆ ಎಂದು ಹಮಾಸ್ ಅನ್ನು ದೂಷಿಸಿದ್ದಾರೆ.