ನ್ಯೂಯಾರ್ಕ್: ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ಪ್ರಕರಣದ ಆರೋಪಿ ತಹವ್ವುರ್ ರಾಣಾ, ತನ್ನನ್ನು ಭಾರತಕ್ಕೆ ಹಸ್ತಾಂತರ ಮಾಡಬಾರದು ಎಂಬ ಕೋರಿಕೆಯೊಂದಿಗೆ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದ್ದಾನೆ.
ತಾನು ಪಾಕಿಸ್ತಾನ ಮೂಲದ ಮುಸ್ಲಿಂ ಆಗಿರುವ ಕಾರಣಕ್ಕೆ ಭಾರತದಲ್ಲಿ ತನಗೆ ಹಿಂಸೆ ನೀಡಲಾಗುತ್ತದೆ.
ಹೀಗಾಗಿ ತನ್ನನ್ನು ಭಾರತಕ್ಕೆ ಹಸ್ತಾಂತರ ಮಾಡಬಾರದು ಎಂದು ಆತ ಕೋರಿದ್ದಾನೆ.
ರಾಣಾ ಈಗ ಕೆನಡಾ ದೇಶದ ಪ್ರಜೆ. ಈತನನ್ನು ಈಗ ಲಾಸ್ ಏಂಜಲೀಸ್‌ನ ಜೈಲಿನಲ್ಲಿ ಇರಿಸಲಾಗಿದೆ. ಈತನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ತಿಂಗಳು ಪ್ರಕಟಿಸಿದ್ದರು.
ರಾಣಾನ ಈಗಿನ ಆರೋಗ್ಯ ಸ್ಥಿತಿಯನ್ನು ಗಮನಿಸಿ ಹೇಳುವುದಾದರೆ, ಈತನನ್ನು ಈಗ ಭಾರತಕ್ಕೆ ಹಸ್ತಾಂತರ ಮಾಡಿದರೆ ಆತನಿಗೆ ಮರಣ ದಂಡನೆ ವಿಧಿಸಿದಂತೆ ಆಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈತನಿಗೆ ಹಲವು ಬಾರಿ ಹೃದಯಾಘಾತ ಆಗಿದೆ, ಈತ ಹಲವು ಬಾರಿ ಕೋವಿಡ್‌ಗೆ ತುತ್ತಾಗಿದ್ದಾನೆ, ಜೀವಕ್ಕೆ ಎರವಾಗಬಹುದಾದ ಆರೋಗ್ಯ ಸಮಸ್ಯೆಗಳು ಇವೆ ಎಂದು ವಿವರಿಸಲಾಗಿದೆ.