ಕೀವ್: 'ಉಕ್ರೇನ್‌ನ ಇಂಧನ ಮೂಲಸೌಕರ್ಯದ ವ್ಯವಸ್ಥೆಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿರುವುದು ವಾಸ್ತವಕ್ಕೆ ಹತ್ತಿರವಾಗಿಲ್ಲ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಬುಧವಾರ ಹೇಳಿದ್ದಾರೆ.
ಹೆಲ್ಸಿಂಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝೆಲೆನ್‌ಸ್ಕಿ, 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಂಗಳವಾರ ದೂರವಾಣಿ ಕರೆಯಲ್ಲಿ ಮಾತನಾಡಿದ ಪುಟಿನ್, ಉಕ್ರೇನ್‌ನ ಇಂಧನ ಘಟಕಗಳ ಮೇಲೆ ದಾಳಿ ನಡೆಸದಂತೆ ಆದೇಶಿಸಲಾಗಿದೆ ಎಂದು ಹೇಳಿದ್ದರು.
ಆದರೆ, ಇದಾದ ಬಳಿಕವೇ ನಮ್ಮ ಇಂಧನ ಘಟಕ ಸೇರಿದಂತೆ ಹಲವೆಡೆ ರಾತ್ರಿಯಿಡೀ 150 ಡ್ರೋನ್‌ಗಳಿಂದ ದಾಳಿ ನಡೆಸಲಾಗಿದೆ' ಎಂದರು.
ದಾಳಿಯಿಂದಾಗಿ ಆಸ್ಪತ್ರೆ ಹಾಗೂ ವಸತಿ ಪ್ರದೇಶಗಳು ಸೇರಿದಂತೆ ಹಲವೆಡೆ ಹಾನಿಯುಂಟಾಗಿದೆ ಎಂದು ತಿಳಿಸಿದರು.
'ಟ್ರಂಪ್ ಅವರೊಂದಿಗೆ ನಾನು ಮಾತುಕತೆ ನಡೆಸುತ್ತೇನೆ. ಯುದ್ಧ ವಿರಾಮದ ಬಗ್ಗೆ ಪುಟಿನ್ ಹಾಗೂ ಟ್ರಂಪ್ ಅವರ ದೂರವಾಣಿ ಸಂಭಾಷಣೆ ಕುರಿತು ಇನ್ನಷ್ಟು ತಿಳಿದುಕೊಳ್ಳುತ್ತೇನೆ. ಬಳಿಕ ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸುತ್ತೇನೆ' ಎಂದು ಹೇಳಿದ್ದಾರೆ.
ಉಕ್ರೇನ್ ವಿವಿಧೆಡೆ ಡ್ರೋನ್ ದಾಳಿ
ಕೀವ್: ಕದನ ವಿರಾಮ ಪ್ರಸ್ತಾವವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿರಸ್ಕರಿಸಿದ ಹಿಂದೆಯೇ ರಷ್ಯಾದ ಸೇನೆಯು ಉಕ್ರೇನ್‌ನ ವಿವಿಧ ನಗರಗಳ ಮೇಲೆ ಸರಣಿ ಡ್ರೋನ್ ದಾಳಿ ನಡೆಸಿದೆ. ಡ್ರೋನ್ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಆಸ್ಪತ್ರೆ ಜಖಂಗೊಂಡಿದೆ. 'ಇಂಧನ ಮೂಲಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ. 30 ದಿನ ಕದನವಿರಾಮ ಘೋಷಿಸಬೇಕು ಎಂಬ ಪ್ರಸ್ತಾವವನ್ನು ಪುಟಿನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ನಡೆಸಿದ ಮಾತುಕತೆ ವೇಳೆ ತಳ್ಳಿಹಾಕಿದ್ದರು.