ಬೆಲ್‌ಗ್ರೇಡ್: ಸರ್ಬಿಯಾದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಗಳಿಗೆ ಬೆಂಬಲವಾಗಿ ಸಂಸತ್‌ನಲ್ಲಿ ವಿಪಕ್ಷಗಳ ನಾಯಕರು ಹೊಗೆ ಬಾಂಬ್, ಮೊಟ್ಟೆ, ನೀರಿನ ಬಾಟಲಿಗಳನ್ನು ಎಸೆದು ಗಲಾಟೆ ಸೃಷ್ಟಿಸಿದ್ದಾರೆ. ಘಟನೆಯಲ್ಲಿ ಹಲವು ಶಾಸಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೊಗಳು ಹರಿದಾಡುತ್ತಿವೆ. ಸಂಸತ್‌ನಲ್ಲಿ ಅಧಿವೇಶನ ಆರಂಭವಾಗುತ್ತಿದ್ದಂತೆ ಬಣ್ಣದ ಹೊಗೆ ಬರುವ ಬಾಂಬ್‌ಗಳನ್ನು ಎಸೆದಿದ್ದಾರೆ, ಇದರಿಂದ ಗದ್ದಲ ಉಂಟಾಗಿದ್ದು, ಶಾಸಕರು ಸೇರಿದಂತೆ ಅಲ್ಲಿ ನೆರೆದಿದ್ದವರು ಗೊಂದಲಕ್ಕೀಡಾದ ದೃಶ್ಯಗಳನ್ನು ವಿಡಿಯೊಗಳಲ್ಲಿ ಕಾಣಬಹುದಾಗಿದೆ.
ಕಳೆದ ವರ್ಷ ರೈಲು ನಿಲ್ದಾಣವೊಂದರ ಮೇಲ್ಛಾವಣಿ ಕುಸಿದು ಕನಿಷ್ಠ 15 ಜನರು ಮೃತಪಟ್ಟಿದ್ದರು. ಹೀಗಾಗಿ ವಿದ್ಯಾರ್ಥಿ ಸಂಘಟನೆಗಳು ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ತಿಂಗಳುಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಜನವರಿಯಲ್ಲಿ ಮಿಲೋಸ್ ವುಸೆವಿಕ್ ಅವರು ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮಂಗಳವಾರ ಅವರ ರಾಜೀನಾಮೆಯನ್ನು ಔಪಚಾರಿಕಗೊಳಿಸಲು ಸಂಸದರು ಸಂಸತ್‌ನಲ್ಲಿ ಸಜ್ಜಾಗಿದ್ದರು. ಈ ವೇಳೆ ವಿಪಕ್ಷ ನಾಯಕರು ದಾಳಿ ನಡೆಸಿದ್ದಾರೆ.
2 ವರ್ಷಗಳ ಹಿಂದೆ ಭಾರತದ ಸಂಸತ್ ಒಳಗೆ ಮೈಸೂರು ಮೂಲದ ಮನೋರಂಜನ್ ಎನ್ನುವಾತ ಇದೇ ಮಾದರಿಯಲ್ಲಿ ಸ್ಮೋಕ್ ಕ್ಯಾನ್ ಅಥವಾ ಹೊಗೆ ಉಗುಳುವ ಡಬ್ಬಿ ಎಸೆದು ದಾಂಧಲೆ ಸೃಷ್ಟಿಸಿದ್ದನ್ನು ಇಲ್ಲಿ ನೆನಪಿಸಬಹುದು.