ರಾಯಪುರ: ಛತ್ತೀಸಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ನಿವಾಸದ ಮೇಲೆ ಬುಧವಾರ ಸಿಬಿಐ ದಾಳಿ ನಡೆಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ರಾಯಪುರ ಮತ್ತು ಭಿಲಾಯಿಯಲ್ಲಿರುವ ಬಘೇಲ್ ಅವರ ನಿವಾಸ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಮಾಜಿ ಮುಖ್ಯಮಂತ್ರಿಯ ಆಪ್ತ ಸಹಚರರ ನಿವಾಸಗಳ ಮೇಲೆ ಸಿಬಿಐ ತಂಡಗಳು ದಾಳಿ ನಡೆಸಿವೆ ಎಂದು ಅವರು ಹೇಳಿದ್ದಾರೆ.ಶೋಧದ ಬಗ್ಗೆ ಸಿಬಿಐ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.
ಇದಕ್ಕೂ ಮೊದಲು, ಬಘೇಲ್ ಸೋಮವಾರ ತಮ್ಮ ನಿವಾಸದ ಮೇಲೆ ನಡೆದ ಇ.ಡಿ ದಾಳಿ ಬಿಜೆಪಿಯ ಹತಾಶೆಯ ಪರಿಣಾಮ ಎಂದು ಹೇಳಿದ್ದರು.
ನಾನು ನನ್ನ ಪತ್ನಿ, ಮೂವರು ಹೆಣ್ಣುಮಕ್ಕಳು, ಒಬ್ಬ ಮಗ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿರುವ ಮನೆಯಲ್ಲಿ ಇ.ಡಿ ₹32-33 ಲಕ್ಷ ನಗದು ವಶಪಡಿಸಿಕೊಂಡಿದೆ ಎಂದು ಬಘೇಲ್ ಹೇಳಿಕೊಂಡಿದ್ದರು.
ಇತ್ತೀಚೆಗೆ, ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಘೇಲ್ ಅವರ ನಿವಾಸದಲ್ಲಿ ಶೋಧ ನಡೆಸಿತ್ತು.