HEALTH TIPS

ಮಧೂರು ದೇವಾಲಯಕ್ಕೆ ಭಕ್ತರ ದಂಡು

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ವೈಭವ ಕಳೆಗಟ್ಟಿದೆ. ಭಕ್ತರ ದಂಡು ಹರಿದು ಬರುತ್ತಿದೆ.

ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ದೇಶ-ವಿದೇಶಗಳಿಂದ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ಅಂದಾಜು ದೇವಸ್ಥಾನ ಸಮಿತಿಯದ್ದು.

ಕರಸೇವಕ ಸ್ವಯಂಸೇವಕರ ನಿರಂತರ ಸೇವೆ:

ಕಾಸರಗೋಡು ಸೇರಿದಂತೆ ಸುತ್ತಲಿನ ಗ್ರಾಮಗಳವರು ಯುವಕರಿಂದ ವೃದ್ಧರ ವರೆಗೂ ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರೆ. ಕಸಗುಡಿಸುವುದರಿಂದ ಹಿಡಿದು ತರಕಾರಿ ಹೆಚ್ಚುವವರೆಗೂ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಜಾತ್ರಾ ಸಮಿತಿಯವರು ಸ್ವಯಂ ಸೇವಕರಿಗೆ ಗುರುತಿನ ಚೀಟಿ, ಬಿಸಿಲಿನಿಂದ ರಕ್ಷಣೆ ಪಡೆಯಲು ಬಿಳಿ ಟೊಪ್ಪಿಗೆ, ಕೇಸರಿ ಶಲ್ಯ ನೀಡಿದ್ದಾರೆ. ಮಧೂರು ದೇವಸ್ಥಾನದ ಪರಿಸರದಲ್ಲಿ ಎತ್ತ ನೋಡಿದರೂ ಕೇಸರಿ ಶಲ್ಯ ಧರಿಸಿದವರೇ ಕಂಡುಬರುತ್ತಿದ್ದಾರೆ.


ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೂ ಸ್ವಯಂ ಸೇವಕರ ಅಚ್ಚುಕಟ್ಟಿನ ಸೇವೆ ಎದ್ದುಕಾಣುತ್ತಿದೆ.

'ನನ್ನ ತಾಯಿ ಚಿಕ್ಕವರಿದ್ದಾಗ ಇಲ್ಲಿಯ ಬ್ರಹ್ಮಕಲಶೋತ್ಸವದ ಸೇವೆಯಲ್ಲಿ ಭಾಗವಹಿಸಿದ್ದರಂತೆ. ಈಗ ನಾನು ಪಾಲ್ಗೊಂಡಿದ್ದು, ಖುಷಿಕೊಟ್ಟಿದೆ' ಎಂದು ವಿದ್ಯಾರ್ಥಿನಿ ಲಿಖಿತಾ ಹೇಳಿದರು.

'12ನೇ ತರಗತಿ ಪರೀಕ್ಷೆ ಮುಗಿದಿದೆ. ನನಗೀಗ ಬಿಡುವುದು. ಸ್ವಯಂ ಸೇವಕಿಯಾಗಿ ದೇವರ ಸೇವೆ ಸಲ್ಲಿಸುವಲ್ಲಿ ಸಂತೃಪ್ತ ಭಾವ ಮೂಡಿದೆ' ಎಂದು ಇನ್ನೊಬ್ಬ ವಿದ್ಯಾರ್ಥಿನಿ ಶರಣ್ಯಾ ಖುಷಿಪಟ್ಟರು.

ನಾಲ್ಕು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ಅದರಲ್ಲಿ ಒಂದು ವೇದಿಕೆಯನ್ನು ಅಖಂಡ ಭಜನೆಗೆ ಮೀಸಲಿಡಲಾಗಿದೆ. ಸುತ್ತಲಿನ ಭಜನಾ ಮಂಡಳಿಯವರು ಬಂದು ಇಲ್ಲಿ ಭಜನಾ ಸೇವೆ ನೀಡುತ್ತಿದ್ದಾರೆ.

'ಬ್ರಹ್ಮಕಲಶ ಸಂದರ್ಭದಲ್ಲಿ ಭಗವಂತನ ಸೇವೆ ಮಾಡಲು ಬಂದಿದ್ದೇವೆ. ಭಜನಾ ಸೇವೆಗೆ ನಮಗೆ ಅವಕಾಶ ಕಲ್ಪಿಸಿದ್ದು ಸಂತಸ ತಂದಿದೆ' ಎಂದು ಪುತ್ತೂರು ನಗರಸಭೆಯ ಸದಸ್ಯೆಯೂ ಆಗಿರುವ, ಪುತ್ತೂರಿನ ಅಮ್ಮ ಉಳ್ಳಾಲ್ತಿ ಭಜನಾ ಮಂಡಳಿಯ ಗೌರಿ ಹೇಳಿದರು.

'ನಾವು ಯಾವುದೇ ಹೊಸ ಕೆಲಸ ಮಾಡುವ ಮುನ್ನ ದೇವರಿಗೆ ಕಾಣಿಕೆ ಸರ್ಮಪಿಸಿಯೇ ಆರಂಭಿಸುತ್ತೇವೆ. ದೇವರು ಸದಾ ನಮಗೆ ಒಳ್ಳೆಯದ್ದನ್ನೇ ಮಾಡುತ್ತಿದ್ದಾನೆ' ಎಂದು ಬಾಯಾರು ಪೈವಳಿಕೆಯ ಎನ್‌.ರಾಮಕೃಷ್ಣ ಭಟ್‌ ಹೇಳಿದರು.

ನೂತನವಾಗಿ ನಿರ್ಮಿಸಿರುವ ಸ್ವಾಗತ ಗೋಪುರ ಅತ್ಯಾಕರ್ಷಕವಾಗಿದ್ದು, ದೇವರ ದರ್ಶನ ಮುಗಿಸಿ ಬರುವಾಗ ಇದರ ಎದುರು ನಿಂತು ಭಕ್ತರು ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ದೇವಸ್ಥಾನದ ಸುತ್ತು ಪೌಳಿಯ ದಾರು ಶಿಲ್ಪ ಅತ್ಯಂತ ಮನಮೋಹಕವಾಗಿದೆ. ಪೌಳಿಯ ಸುತ್ತು ಒಂದೇ ಅಂತರದಲ್ಲಿ ಜೋಡಿಸಿರುವ 136 ಗಣಪತಿಯ ದಾರು ಶಿಲ್ಪಗಳನ್ನು ವೀಕ್ಷಿಸಿ ಅವುಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಮೃತ್ತಿಕಾ ವಿಗ್ರಹ

‌ಇದು 2 ಸಾವಿರ ವರ್ಷದ ದೇವಸ್ಥಾನ ಎಂದು ಹೇಳುತ್ತಾರೆ. ಇಲ್ಲಿಯ ಗಣಪತಿಯದ್ದು ಮೃತ್ತಿಕಾ ವಿಗ್ರಹ. ಹೀಗಾಗಿ ಆ ಮೂರ್ತಿಗೆ ಯಾವುದೇ ರೀತಿಯ ಅಭಿಷೇಕ, ಅಲಂಕಾರ ನಡೆಯುವುದಿಲ್ಲ. ಇಲ್ಲಿ ಇರುವ ಎಲ್ಲ ದೇವರ ವಿಗ್ರಹಗಳು ಉದ್ಭವ ಮೂರ್ತಿಗಳು. 1962ರಲ್ಲಿ ಪ್ರಥಮ ಹಾಗೂ1992ರಲ್ಲಿ ದ್ವಿತೀಯ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆ ನಡೆದಿತ್ತು. ಈಗ 32 ವರ್ಷಗಳ ನಂತರ ನಡೆಯುತ್ತಿದೆ.

ಶ್ರೀಕೃಷ್ಣ ಉಪಾಧ್ಯಾಯ, ಪ್ರಧಾನ ಅರ್ಚಕರು, ಮಧೂರು ದೇವಾಲಯ1028 ಕಲಶ ಮಾಡಿ ರುದ್ರಪಾರಾಯಣದ ಮೂಲಕ ದೇವರಿಗೆ ಅರ್ಪಣೆ ಮಾಡುವುದು ಬ್ರಹ್ಮಕಲಶೋತ್ಸವ. ಮೂಡಪ್ಪ ಸೇವೆ ಇಲ್ಲಿಯ ವಿಶೇಷತೆ. ಅಪ್ಪ ತಯಾರಿಸಲು ಬೇಕಾದ ಅಕ್ಕಿಯನ್ನು ದೇಗುಲದ ಸಮೀಪದ ಗದ್ದೆಯಲ್ಲಿ ಸಾವಯವ ರೀತಿಯಲ್ಲಿ ಬೆಳೆಯಲಾಗಿದೆ. ‌ಅಕ್ಕಿಯ ಹುಡಿಯನ್ನು ದೇವಸ್ಥಾನ ಪ್ರಾಂಗಣದಲ್ಲಿಯೇ ಮಾಡಿ, ಅಪ್ಪ ತಯಾರಿಸಲಾಗುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries