ಲಖನೌ: ಪ್ರೀತಿಯ ಸಾಕುಪ್ರಾಣಿಗಳ ಹೆಸರಿಗೆ ಆಸ್ತಿ ಬರೆದವರ ಬಗ್ಗೆ ಜನ ಓದಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ತಮ್ಮ ಪ್ರೀತಿಯ ಬೆಕ್ಕು ಮೃತಪಟ್ಟ ನಂತರ ದುಃಖ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಅಮರೋಹಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯ ಹೆಸರು ಪೂಜಾ. ಇವರು ಜಿಲ್ಲೆಯ ಹಸನ್‌ಪುರದ ನಿವಾಸಿಯಾಗಿದ್ದರು.
ಪೂಜಾ ಅವರು ಬೆಕ್ಕೊಂದನ್ನು ಸಾಕಿದ್ದರು. ಅದು ನಾಲ್ಕು ದಿನಗಳ ಹಿಂದೆ ಸತ್ತಿದೆ. ಆ ಬೆಕ್ಕಿನ ಜೊತೆ ಪೂಜಾ ಅವರು ಅದೆಷ್ಟು ಗಾಢವಾದ ಸಂಬಂಧವನ್ನು ಬೆಳೆಸಿಕೊಂಡಿದ್ದರು ಎಂದರೆ, ಬೆಕ್ಕು ಸತ್ತ ನಂತರ ಅದನ್ನು ಹೂಳಲೂ ಇಲ್ಲ.
'ಬೆಕ್ಕಿಗೆ ಬಹಳ ಬೇಗ ಜೀವ ಬರುತ್ತದೆ. ಹಾಗಾಗಿ ಅದನ್ನು ಹೂಳುವುದಿಲ್ಲ' ಎಂದು ಪೂಜಾ ಹೇಳುತ್ತಿದ್ದರು ಎಂದು ಅವರ ತಾಯಿ ಹೇಳಿದ್ದಾರೆ. ಪೂಜಾ ಅವರು ಶನಿವಾರ ರಾತ್ರಿ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಬೆಕ್ಕಿನ ಮೃತದೇಹ ಕೂಡ ಪೂಜಾ ಅವರ ಸಮೀಪದಲ್ಲೇ ಇತ್ತು. ಪೂಜಾ ಅವರು ಆರು ವರ್ಷಗಳ ಹಿಂದೆ ಪತಿಯಿಂದ ಬೇರೆಯಾಗಿದ್ದರು. ಪೂಜಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂಜಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ತನಿಖೆ ಮುಂದುವರಿದಿದೆ.