ನವದೆಹಲಿ: ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿರುವ ಮೊಘಲ್ ದೊರೆ ಔರಂಗಜೇಬ್ ಗುಮ್ಮಟ ತೆರವಿಗೆ ಆಗ್ರಹಿಸಿ ನಾಗ್ಪುರದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ಒತ್ತಾಯಿಸಿದೆ.
'ಸೋಮವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೂ 45 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ 34 ಪೊಲೀಸರು ಹಾಗೂ ಇತರ ಐವರಿಗೆ ಗಾಯಗಳಾಗಿವೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಶೇಖರ ಬವಾಂಕುಲೆ ಮಂಗಳವಾರ ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್‌ನ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ ಪರಾಂದೆ ಅವರು ಮಾತನಾಡಿ, 'ನಿರ್ದಿಷ್ಟ ಸಮುದಾಯದ ಜನರು ಈ ದಾಳಿ ನಡೆಸಿ, ಬೆಂಕಿ ಹಂಚಿದ್ದಾರೆ' ಎಂದು ಆರೋಪಿಸಿದ್ದಾರೆ.
'ಬಜರಂಗಳದ ಯುವ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆದಿದೆ. ವಿಶ್ವ ಹಿಂದೂ ಪರಿಷದ್ ಇವೆಲ್ಲವನ್ಣೂ ಖಂಡಿಸುತ್ತದೆ. ಒಂದೆಡೆ ಹಿಂದೂ ಸಮುದಾಯದವರು ಪವಿತ್ರ ಧರ್ಮ ಗ್ರಂಥವನ್ನು ಸುಟ್ಟುಹಾಕಿದ್ದಾರೆ ಎಂಬ ಸುಳ್ಳು ವದಂತಿಯನ್ನು ಹರಡಲಾಯಿತು. ಮತ್ತೊಂದೆಡೆ ಹಿಂಸೆಯನ್ನು ಪ್ರಚೋದಿಸುವ ಹ್ಯೇಯ ಕೃತ್ಯವನ್ನು ನಡೆಸಲಾಯಿತು. ಇಂಥ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು' ಎಂದು ಒತ್ತಾಯಿಸಿದ್ದಾರೆ.
'ಛತ್ರಪತಿ ಸಾಂಭಾಜಿನಗರದಲ್ಲಿರುವ ಔರಂಗಜೇಬನ ಗುಮ್ಮಟವನ್ನು ವೈಭವೀಕರಿಸುವುದನ್ನು ನಿಲ್ಲಿಸಬೇಕು. ಇದರ ಬದಲಾಗಿ ಔರಂಗಬೇಜ್‌ನನ್ನು ಪರಾಭವಗೊಳಿಸಿದ ಧಾನಾಜಿ ಜಾಧವ್, ಶಾಂತಾಜಿ ಘೋರ್ಪಡೆ ಮತ್ತು ಛತ್ರಪತಿ ರಾಜಾರಾಮ್‌ಜಿ ಮಹಾರಾಜ್ ಅವರ ನೆನಪಿಗಾಗಿ 'ವಿಜಯ ಸ್ಮಾರಕ' ನಿರ್ಮಿಸಬೇಕು' ಎಂದು ಆಗ್ರಹಿಸಿದರು.
'ಮರಾಠಾ ಸಾಮ್ರಾಜ್ಯದಲ್ಲಿ ಔರಂಗಬೇಜ್‌ನನ್ನು ಪರಾಭವಗೊಳಿಸಿದ ನೆನಪಿಗಾಗಿ ವಿಜಯ ಸ್ತಂಭ ನಿರ್ಮಿಸಬೇಕು. ಅದಕ್ಕೂ ಪೂರ್ವದಲ್ಲಿ ಹಿಂಸಾಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು' ಎಂದು ಪರಾಂದೆ ಹೇಳಿದ್ದಾರೆ.
ನಾಗ್ಪುರದ ಕೇಂದ್ರ ಭಾಗವಾದ ಚಿಟ್ನಿಸ್ ಪಾರ್ಕ್ ಬಳಿ ಸೋಮವಾರ ಹಿಂಸಾಚಾರ ನಡೆಯಿತು. ಔರಂಗಜೇಬ್ ಗುಮ್ಮಟ ತೆರವುಗೊಳಿಸುವಂತೆ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಂದರ್ಭದಲ್ಲಿ ಧರ್ಮವೊಂದರ ಪವಿತ್ರ ಗ್ರಂಥವನ್ನು ಸುಟ್ಟು ಹಾಕಲಾಯಿತು ಎಂಬ ವದಂತಿಯಿಂದ ಹಿಂಸಾಚಾರ ಬುಗಿಲೆದ್ದಿತು.