ಲಂಡನ್: ಉತ್ತರ ಇಂಗ್ಲೆಂಡ್‌ನ ಹೆಣ್ಣು ಕುರಿಯಲ್ಲಿ ಹಕ್ಕಿ ಜ್ವರ (ಬರ್ಡ್ ಫ್ಲೂ) ಪತ್ತೆಯಾಗಿದ್ದು, ಇದು ಬ್ರಿಟನ್‌ನ ಮೊದಲ ಪ್ರಕರಣ ಎಂದು ಇಂಗ್ಲೆಂಡ್ ಸರ್ಕಾರ ಹೇಳಿದೆ. ಸಸ್ತನಿಗಳಲ್ಲಿ(ಹಾಲುಣಿಸುವ ಪ್ರಾಣಿಗಳು) ಸೋಂಕು ಹೆಚ್ಚಳ ಆಗುತ್ತಿರುವುದು ಸಾಂಕ್ರಾಮಿಕ ರೋಗದ ಆತಂಕಕ್ಕೆ ಕಾರಣವಾಗಿದೆ.
ಹೆಚ್5ಎನ್1 ಹಕ್ಕಿ ಜ್ವರದ ವೈರಾಣುವಿನಿಂದಾಗಿ ವಿಶ್ವದಾದ್ಯಂತ ಕರಡಿ, ಬೆಕ್ಕು, ಹಸುಗಳು, ಶ್ವಾನಗಳು, ಡಾಲ್ಫಿನ್, ಕಡಲು ನಾಯಿ ಮತ್ತು ಹುಲಿಗಳು ಸಾವನ್ನಪ್ಪಿವೆ. ಯಾರ್ಕ್‌ಶೈರ್‌ನ ಹಕ್ಕಿಗಳಲ್ಲಿ ಮಾರಕ ಸಾಂಕ್ರಾಮಿಕ ಸೋಂಕು (ಹೆಚ್5ಎನ್1) ಪತ್ತೆಯಾದ ನಂತರ ನಿರಂತರ ತಪಾಸಣೆ ವೇಳೆ ಕುರಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ ಎಂದು ಬ್ರಿಟನ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಪಕ್ಷಿ ಮತ್ತು ಪ್ರಾಣಿಗಳಲ್ಲಿ ಕಾಣಿಸಿಕೊಂಡಿರುವ ವೈರಾಣು ಮನುಷ್ಯರಿಗೆ ಹಬ್ಬಿರುವ ಬಗ್ಗೆ ದೃಢಪಟ್ಟಿಲ್ಲ. ಸೋಂಕು ಪತ್ತೆಯಾಗಿರುವ ಕುರಿಯ ಹಾಲಿನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಸೋಂಕಿತ ಹೆಣ್ಣು ಕುರಿಯನ್ನು ಕೊಲ್ಲಲಾಗಿದ್ದು, ಕುರಿ ಮಂದೆಯಲ್ಲಿ(ಹಿಂಡು) ಲಕ್ಷಣಗಳು ಕಾಣಿಸಿಕೊಂಡಿಲ್ಲ.
ಹಕ್ಕಿ ಜ್ವರ ಕಾಣಿಸಿಕೊಂಡ ಸ್ಥಳಗಳಲ್ಲಿ ಜನರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಜಾಗತಿಕವಾಗಿ ಸಸ್ತನಿಗಳ ಮೂಲಕ ಮಾರಕ ವೈರಾಣು ಹರಡುತ್ತಿರುವುದು ಪತ್ತೆಯಾಗಿದೆ ಎಂದು ಇಂಗ್ಲೆಂಡ್ ಹೆಲ್ತ್ ಸೆಕ್ಯೂರಿಟಿ ಏಜೆನ್ಸಿಯ ಕಾರ್ಯದರ್ಶಿ ಮೀರಾ ಚಂದ್ ತಿಳಿಸಿದ್ದಾರೆ.
ಮಾರಕ ಸೋಂಕು ಹಕ್ಕಿ ಜ್ವರ ಈಗ ಸಾಮಾನ್ಯವಾಗಿದೆ. ಜಗತ್ತಿನೆಲ್ಲೆಡೆ ವ್ಯಾಪಿಸಿದ್ದರೂ ಮನುಷ್ಯರಿಗೆ ಸುಲಭವಾಗಿ ಹರಡುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.
2024ರಲ್ಲಿ ಅಮೆರಿಕದ ಡೈರಿ ಹಸುಗಳಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರ ಆನಂತರ ಹೆಚ್ಚು ವ್ಯಾಪಿಸಿಕೊಂಡಿತ್ತು.