ಮಂಜೇಶ್ವರ: ಕಾಸರಗೋಡು ಸಹಿತ ಕರಾವಳಿ ತೀರದ ತುಳುನಾಡಿನಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ದಾನಿಗಳ ನೆರವನಿನಲ್ಲಿ ಹಲವಾರು ಧಾರ್ಮಿಕ ಶ್ರದ್ಧಾಕೇಂದ್ರಗಳು ಪುನರುತ್ಥಾನಗೊಂಡಿದ್ದು, ಎಲ್ಲಾ ಜಾತಿ, ಪಂಗಡಗಳು ಮೇಲು-ಕೀಳು ಇಲ್ಲದೆ ಸಂಘಟಿತರಾಗಿ ಸುಸಂಸ್ಕೃತ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಮಂಜೇಶ್ವರ ಕೀರ್ತೇಶ್ವರ ಸದಾಶಿವ ದೇವಸ್ಥಾನದಲ್ಲಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ರಾತ್ರಿ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಉದ್ಯಮಿ ಕೆ.ಕೆ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಾಲಯಗಳ ಜೀಣೋದ್ಧಾರಕ್ಕೆ ಭಕ್ತರಿಗೆ ಸ್ವಯಂ ದೇವರೇ ಪ್ರೇರಣೆ ನೀಡುತ್ತಾರೆ ಎಂದರು.
ಬೆಂಗಳೂರು ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನದ ಶ್ರೀ ಪೂರ್ಣಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ತ್ಯಾಗ ಮನೋಭಾವದಿಂದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಮಾನಸಿಕ ನೆಮ್ಮದಿ ಲಭ್ಯವಾಗುತ್ತದೆ ಎಂದರು.
ಜ್ಯೋತಿಷ್ಯ ವಿದ್ವಾನ್ ರಂಗ ಐತಾಳ್ ಧಾರ್ಮಿಕ ಉಪನ್ಯಾಸ ನೀಡಿದರು. ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಉದ್ಯಮಿ ಮಾಧವ ಎಸ್.ಮಾವೆ ಸಾಲೆತ್ತೂರು, ಅಖಿಲ ಕರ್ನಾಟಕ ಗಾಣಿಗ ಸಂಘದ ನಿರ್ದೇಶಕ ಭಾಸ್ಕರ ಎಸ್.ಎಡಪದವು, ಪ್ರಮುಖರಾದ ರಂಗರಾಜು ಬೆಂಗಳೂರು, ವಿಜಯ ಕುಮಾರ್ ಬೆಂಗಳೂರು ಶುಭ ಹಾರೈಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಲಕ್ಷ್ಮಣ ಅಂಜರೆ, ಜಯರಾಮ್ ಮಂಜೇಶ್ವರ, ಶ್ರವಣ್ ಇವರನ್ನು ಸನ್ಮಾನಿಸಲಾಯಿತು. ಮಂಗಳೂರು ಕುಡುಪು ಟೀಮ್ ಬನ್ವಾರಿ ಅಧಿತಿ ಗಾಣಿಗ ಇವರು ಹಾಡಿದ ಭಕ್ತಿಗೀತೆ ಯೂಟ್ಯೂಬ್ ಹಾಡು ಬಿಡುಗಡೆಗೊಳಿಸಲಾಯಿತು. ಮಂಜೇಶ್ವರ ಗಾಣಿಗ ಸಂಘದ ಪ್ರಭಾರ ಅಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸತೀಶ್ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಗೇರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರದೀಶ್ ಕುಮಾರ್ ಮಂಜೇಶ್ವರ ವಂದಿಸಿದರು. ದೀಪಕ್ ಅಡ್ಯಾರು ಕಾರ್ಯಕ್ರಮ ನಿರೂಪಿಸಿದರು.