ಹೈದರಾಬಾದ್: ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲದ ಇಡೀ ಪ್ರದೇಶವನ್ನು 'ನೋ ಫ್ಲೈ ಜೋನ್' (ವಿಮಾನ ಹಾರಾಟ ನಿಷೇಧ ವಲಯ) ಎಂದು ಘೋಷಿಸುವಂತೆ ಕೋರಿ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
ಆಗಮ ಶಾಸ್ತ್ರದ ತತ್ವಗಳು, ದೇವಾಲಯದ ಪಾವಿತ್ರ್ಯತೆ, ಸುರಕ್ಷತೆ ಮತ್ತು ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ತಿರುಮಲವನ್ನು 'ನೋ ಫ್ಲೈ ಝೋನ್' ಎಂದು ಘೋಷಿಸುವಂತೆ ಶನಿವಾರ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ತಿರುಮಲ ಬೆಟ್ಟದ ವಾಯು ಪ್ರದೇಶದಲ್ಲಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ದೇವಸ್ಥಾನದ ಪವಿತ್ರ ವಾತಾವರಣವನ್ನು ಹಾಳುಮಾಡುತ್ತಿವೆ ಎಂದಿದ್ದಾರೆ.
ವೈಖಾನಸ ಆಗಮ ಶಾಸ್ತ್ರದ ಪ್ರಕಾರ, ತಿರುಮಲ ದೇವಾಲಯದ ಮುಖ್ಯ ಗರ್ಭಗುಡಿ 'ಆನಂದ ನಿಲಯ'ದ ಮೇಲೆ ಯಾವುದೇ ರೀತಿಯ ಲೋಹದ ವಸ್ತುಗಳು ಹಾರಾಟ ನಡೆಸುವುದನ್ನು ನಿಷೇಧಿಸಲಾಗಿದೆ.
ತಿರುಮಲ ದೇವಸ್ಥಾನದ ಮೇಲಿನ ವಾಯುಪ್ರದೇಶವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಅಧಿಕೃತವಾಗಿ 'ನೋ ಫ್ಲೈ ಝೋನ್' ಎಂದು ಘೋಷಿಸಿಲ್ಲ. ಆದರೂ, ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳು 'ಆನಂದ ನಿಲಯ'ದ ಮೇಲಿನ ವಾಯು ಪ್ರದೇಶದಲ್ಲಿ ಹಾರಾಟ ನಡೆಸುವುದನ್ನು ತಪ್ಪಿಸುತ್ತಿವೆ.