ಪ್ರಯಾಗರಾಜ್/ನವದೆಹಲಿ (PTI): ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ನೋಟುಗಳ ಕಂತೆ ಪತ್ತೆಯಾದ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಸಮಿತಿಯು ವಿಚಾರಣೆ ಶುರುಮಾಡಿದೆ ಎಂದು ಮೂಲಗಳು ಹೇಳಿವೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಸಂಧಾವಾಲಿಯಾ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಸಮಿತಿಯಲ್ಲಿದ್ದಾರೆ.
ಸಮಿತಿ ಸದಸ್ಯರು ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಅರ್ಧ ಗಂಟೆ ಇದ್ದರು, ಸ್ಥಳವನ್ನು ಪರಿಶೀಲಿಸಿದರು ಎಂದು ಗೊತ್ತಾಗಿದೆ.
ಮುಷ್ಕರ ಆರಂಭ: ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡುವು ದನ್ನು ವಿರೋಧಿಸಿ ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘವು ಮಂಗಳವಾರ ಮುಷ್ಕರ ಆರಂಭಿಸಿದೆ.
'ಈ ಪ್ರತಿಭಟನೆಯು ನ್ಯಾಯಾಲಯ ಅಥವಾ ನ್ಯಾಯಮೂರ್ತಿಯ ವಿರುದ್ಧ ಅಲ್ಲ. ನ್ಯಾಯಾಂಗ ವ್ಯವಸ್ಥೆಗೆ ಮೋಸ ಎಸಗಿರುವವರ ವಿರುದ್ಧ ಈ ಪ್ರತಿಭಟನೆ' ಎಂದು ಸಂಘದ ಅಧ್ಯಕ್ಷ ಅನಿಲ್ ತಿವಾರಿ ಹೇಳಿದರು.
'ಭ್ರಷ್ಟಾಚಾರದಲ್ಲಿ ತೊಡಗಿದವರು ಹಾಗೂ ಪಾರದರ್ಶಕತೆಯ ಕೊರತೆ ಇರುವ ವ್ಯವಸ್ಥೆಯ ವಿರುದ್ಧ ನಮ್ಮ ಪ್ರತಿಭಟನೆ. ವರ್ಗಾವಣೆ ಆದೇಶದ ಮರುಪರಿಶೀಲನೆ ಆಗಬೇಕು ಹಾಗೂ ಅದನ್ನು ಹಿಂಪಡೆಯಬೇಕು ಎಂಬುದು ಈಗ ನಮ್ಮ ಬೇಡಿಕೆ' ಎಂದರು.
ಲೋಕಸಭೆಯಲ್ಲಿ ಚರ್ಚೆಗೆ ಆಗ್ರಹ
ನವದೆಹಲಿ (ಪಿಟಿಐ): ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ನಗದು ಸಿಕ್ಕಿದೆ ಎಂಬ ಆರೋಪದ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್ ಸದಸ್ಯ ಹಿಬಿ ಈಡನ್ ಅವರು ಲೋಕಸಭೆಯಲ್ಲಿ ಮಂಗಳವಾರ ಒತ್ತಾಯಿಸಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಅವರು ನ್ಯಾಯಾಂಗದಲ್ಲಿ ಹೆಚ್ಚಿನ ಮಟ್ಟದಲ್ಲಿ ಉತ್ತರದಾಯಿತ್ವ ಸಾಧ್ಯವಾಗಿಸಲು ತೃಪ್ತಿಕರವಾದ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಚರ್ಚೆ ಆಗಬೇಕು ಎಂದು ಹೇಳಿದರು.