ಸಂಭಾಲ್: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಬಿಜೆಪಿ ನಾಯಕನೊಬ್ಬನಿಗೆ ಮೂವರು ಅಪರಿಚಿತ ವ್ಯಕ್ತಿಗಳು ವಿಷಕಾರಿ ವಸ್ತುವನ್ನು ಚುಚ್ಚಿದ್ದರಿಂದ ಅವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃತ್ತ ಅಧಿಕಾರಿ (ಗುನ್ನೌರ್) ದೀಪಕ್ ತಿವಾರಿ ಮಾತನಾಡಿ, 'ಸೋಮವಾರ ಸಂಜೆ ಜುನಾವೈ ಪೊಲೀಸ್ ಠಾಣೆ ವ್ಯಾಪ್ತಿಯ ದಫ್ತಾರಾ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಗುಲ್ಫಾಮ್ ಸಿಂಗ್ ಯಾದವ್ (60) ಕುಳಿತಿದ್ದಾಗ, ಮೂವರು ವ್ಯಕ್ತಿಗಳು ಮೋಟಾರ್ ಸೈಕಲ್‌ನಲ್ಲಿ ಅಲ್ಲಿಗೆ ಬಂದಿದ್ದಾರೆ. ಬಳಿಕ ವಿಷದ ಇಂಜೆಕ್ಷನ್ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ' ಎಂದು ತಿಳಿಸಿದ್ದಾರೆ.
'ಯಾದವ್ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಆಲಿಘರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆಯಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಸದ್ಯ ಸಂತ್ರಸ್ತರ ಕುಟುಂಬಸ್ಥರಿಂದ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ. ಪ್ರಕರಣದ ತನಿಖೆಗಾಗಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ' ಎಂದು ತಿಳಿಸಿದರು.
ಯಾದವ್ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಬಿಜೆಪಿ ಟಿಕೆಟ್‌ನಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎನ್ನಲಾಗಿದೆ.