ಕೋಲ್ಕತ್ತ: ಗಗನಯಾನಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಆಗಿರುವುದರ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹರ್ಷ ವ್ಯಕ್ತಪಡಿಸಿದ್ದು, 'ಭಾರತದ ಮಗಳು ನಮ್ಮ ಬಳಿಗೆ ಮರಳಿದ್ದಾರೆ' ಎಂದು ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಷ್ಟು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಉಳಿದುಕೊಂಡಿದ್ದ ಸುನಿತಾ ಮತ್ತು ಅವರ ತಂಡದ ಧೈರ್ಯಕ್ಕೆ ಅಭಿನಂದನೆಗಳು.
ಭಾರತದ ಮಗಳು ನಮ್ಮ ಬಳಿಗೆ ಮರಳಿದ್ದಾರೆ. ಸುನಿತಾ ಮತ್ತು ಬುಚ್ ವಿಲ್ಮೋರ್ ಅವರಿಗೂ ಆತ್ಮೀಯ ಸ್ವಾಗತ. ಇವರ ಆಗಮನವು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
9 ತಿಂಗಳ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆ ತರೆಲು ಪ್ರಯತ್ನಿಸಿದ ರಕ್ಷಣಾ ತಂಡಗಳಿಗೆ ಧನ್ಯವಾದಗಳು ಎಂದು ಮಮತಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಇಂದು ಮುಂಜಾನೆ 3.37ರ ಸುಮಾರಿಗೆ ಫ್ಲೋರಿಡಾದ ಕರಾವಳಿಗೆ ಬಂದಿಳಿದ್ದಾರೆ.
ಕಳೆದ ವರ್ಷ ಜೂನ್ 5ರಂದು ಬೋಯಿಂಗ್‌ನ ಸ್ಟಾರ್‌ಲಿಂಕ್ ಗಗನನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್) ತೆರಳಿದ್ದ ಕ್ರೂ-9 ಮಿಷನ್‌ನ ಸಿಬ್ಬಂದಿ ಸುನಿತಾ ಮತ್ತು ಬುಚ್, ಗಗನನೌಕೆಯಲ್ಲಿ ತಲೆದೋರಿದ ತಾಂತ್ರಿಕ ದೋಷದಿಂದಾಗಿ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಳ್ಳಬೇಕಾಯಿತು.