ತಿರುವನಂತಪುರ: 'ವ್ಯವಸ್ಥಿತವಾಗಿ ಹಾಗೂ ಹಣಬಲದಿಂದ ಮತಾಂತರಗೊಳಿಸುವ ದುಸ್ಸಾಹಸಗಳು ಭಾರತದಲ್ಲಿ ನಡೆಯುತ್ತಿವೆ' ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಕಳವಳ ವ್ಯಕ್ತಪಡಿಸಿದ್ದಾರೆ.
'ಪ್ರಾಬಲ್ಯ ಸಾಧಿಸುವ' ದುರುದ್ದೇಶ ಇದರ ಹಿಂದಿದೆ. ಈ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿದ್ದು, ಇಂತಹ ಯತ್ನಗಳನ್ನು ವಿಫಲಗೊಳಿಸಬೇಕಾಗಿದೆ' ಎಂದು ಅವರು ಸಲಹೆ ಮಾಡಿದರು.
ಭಾರತೀಯ ವಿಚಾರ ಕೇಂದ್ರವು ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ '4ನೇ ಪಿ.ಪರಮೇಶ್ವರನ್ ಸ್ಮಾರಕ ಉಪನ್ಯಾಸ' ನೀಡಿದ ಉಪ ರಾಷ್ಟ್ರಪತಿ, 'ಜನಸಂಖ್ಯೆಯ ಏರಿಕೆ ಸಹಜವಾಗಿರಬೇಕು. ಆದರೆ, ವಸ್ತುಸ್ಥಿತಿ ಹೀಗಿಲ್ಲವಾದಲ್ಲಿ, ಅಂತಹ ಬೆಳವಣಿಗೆಗಳ ಬಗ್ಗೆ ಎಚ್ಚರಿಕೆ ಅಗತ್ಯ' ಎಂದು ಪ್ರತಿಪಾದಿಸಿದರು.
'ಜನಸಂಖ್ಯೆ ಮುಖ್ಯವಾಗುತ್ತದೆ. ಆದರೆ, ಅದನ್ನು ಬಹುಸಂಖ್ಯಾತವಾದ ಎಂದು ತಪ್ಪಾಗಿ ಅರ್ಥೈಸಬಾರದು. ಪ್ರತ್ಯೇಕ ಗುಂಪುಗಳಾಗಿ ವಿಭಜನೆ ಆಗಿರುವ ಸಮಾಜವನ್ನು ಹೊಂದುವುದು ಸಾಧ್ಯವಿಲ್ಲ. ಜನಸಂಖ್ಯೆಯ ಏರಿಕೆ ಸಹಜವಾಗಿರಬೇಕು. ಆಗಷ್ಟೇ ವಿವಿಧತೆಯಲ್ಲಿ ಏಕತೆ ಎಂಬುದು ಬಿಂಬಿತವಾಗಲಿದೆ' ಎಂದು ಹೇಳಿದರು.
'ಈಗ ವಿವಿಧ ಸ್ವರೂಪದಲ್ಲಿ ಮತಾಂತರದ ಯತ್ನಗಳು ನಡೆದಿವೆ. ಪ್ರಲೋಭನೆ, ಪ್ರಚೋದನೆ, ಅಗತ್ಯವುಳ್ಳವರಿಗೆ ಹಣದ ನೆರವು ನೀಡಿ ನಂತರ ಮತಾಂತರಕ್ಕೆ ಒತ್ತಾಯಿಸುವುದು ಇದರಲ್ಲಿ ಸೇರಿವೆ. ಜನರ ನೋವು, ಸಮಸ್ಯೆಗಳನ್ನೇ ಅಸ್ತ್ರವಾಗಿಸಿಕೊಂಡು, ಮತಾಂತರ ಮಾಡುವುದನ್ನು ಸಹಿಸಲಾಗದು' ಎಂದರು.