ಮಧೂರು: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮ. 27ರಿಂದ ಏ. 7ರ ವರೆಗೆ ನಡೆಯಲಿರುವ ಮೂಡಪ್ಪಸೇವೆ ಸಹಿತ ಬ್ರಹ್ಮಕಲಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಧೂರು ದೇಗುಲದಲ್ಲಿ ಶನಿವಾರ ಜರುಗಿತು.
ಶ್ರೀದೇವರ ನಡೆಯಲ್ಲಿ ವಿಶೇಷ ಪ್ರಾರ್ಥನೆಯ ನಂತರ ನಡೆದ ಸಮಾರಂಭದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ, ಮಧೂರು ದೇಗುಲದ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಯನ್ನು ಸೀಮೆಯ ಹಬ್ಬವಾಗಿ ಆಚರಿಸಬೇಕಾದುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಬೇಕು. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇಶದ ಶ್ರೀಮಂತ ಕಲೆಗಳನ್ನು ಪರಿಚಯಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಅನಿವಾರ್ಯವಾಗಿದ್ದು, ಕಲಾಸಾಂಸ್ಕøತಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಲಿ ಎಂದು ಹಾರೈಸಿದರು.
ಇದೇ ಸಂದರ್ಭ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಕಾಯಾಧ್ಯಕ್ಷ ಮಂಜುನಾಥ ಕಾಮತ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ದೇವಸ್ಥಾನದ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಮಾಧ್ಯಮ ಸಮಿತಿ ಸಂಚಾಲಕ ರಾಜೀವನ್ ನಂಬ್ಯಾರ್ ಮೊದಲಾದವರು ಉಪಸ್ಥಿತರಿದ್ದರು. ಆಮಂತ್ರಣ ಪತ್ರಿಕೆ ಮುಖ್ಯ ಪ್ರಾಯೋಜಕರನ್ನು ಶ್ರೀ ಎಡನೀರು ಸ್ವಾಮೀಜಿ ಗೌರವಿಸಿದರು.
ಲೊಕೇಶ್ ಜೋಡುಕಲ್ಲು ಸ್ವಾಗತಿಸಿದರು. ಸತ್ಯನಾರಾಯಣ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಮಧೂರು ವಂದಿಸಿದರು.
ಮೂಡಪ್ಪಸೇವೆ ಸಹಿತ ಬ್ರಹ್ಮಕಲಶೋತ್ಸವ ಸಂದರ್ಭ ಕಲಾ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸೇವಾರೂಪದಲ್ಲಿ ನೀಡಲು 400ಕ್ಕೂ ಮಿಕ್ಕಿ ಸಂಘಟನೆಗಳು ಮುಂದೆ ಬಂದಿದ್ದು, ಇವರಲ್ಲಿ 300 ಸಂಘಗಗಳಿಗೆ ಅವಕಾಶ ನೀಡಲಾಗಿದೆ. ಸಮಯಕ್ಕೆ ಹೊಂದಿಕೊಂಡು ಇತರರಿಗೆ ಅವಕಾಶ ನೀಡಲಾಗುವುದು. ಒಟ್ಟು ನಾಲ್ಕು ವೇದಿಕೆಗಳಲ್ಲಿ ಭಜನೆ, ಯಕ್ಷಗಾನ, ಸಂಗೀತ, ನಾಟ್ಯ, ಗಮಕ, ಹರಿಕಥೆ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.