ನವದೆಹಲಿ: ಭಾರತಕ್ಕೆ ಬೇಕಾಗಿದ್ದ ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆಯ ಕಮಾಂಡರ್‌ನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಎಲ್‌ಇಟಿಯ ಉನ್ನತ ಕಮಾಂಡರ್ ಆಗಿದ್ದ ಜಿಯಾ- ಉರ್- ರೆಹಮಾನ್ ಅಲಿಯಾಸ್ ನದೀಮ್‌ನನ್ನು ಶನಿವಾರ ಸಂಜೆ ಪಾಕಿಸ್ತಾನದ ಪಂಜಾಬ್‌ನ ಝೇಲಮ್ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ನಡೆದ ಹಲವಾರು ಭಯೋತ್ಪಾದನಾ ದಾಳಿಗಳಲ್ಲಿ ಈತನ ಕೈವಾಡವಿತ್ತು.
ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ರೆಹಮಾನ್‌ನ ಭದ್ರತಾ ಸಿಬ್ಬಂದಿಯೂ ಹತ್ಯೆಯಾಗಿದ್ದಾರೆ.
ಎಲ್‌ಇಟಿ ಸಂಸ್ಥಾಪಕ ಹಾಗೂ ಮುಂಬೈ ಮೇಲೆ ನಡೆಸಿದ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯ್ಯದ್‌ನ ನಿಕಟವರ್ತಿಗಳಲ್ಲಿ ಈತನೂ ಒಬ್ಬನಾಗಿದ್ದ ಎನ್ನಲಾಗಿದೆ.
ಜಮ್ಮು- ಕಾಶ್ಮೀರದ ಪೂಂಛ್, ರಜೌರಿ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ತಂತ್ರ ರೂಪಿಸುತ್ತಿದ್ದ ಈತ, ಎಲ್‌ಇಟಿಯ ಚಟುವಟಿಕೆಗಳನ್ನು ಈ ಪ್ರದೇಶದಲ್ಲಿ ವಿಸ್ತರಿಸಿದ್ದ.