ಕಾಸರಗೋಡು: ಬೇಡಡ್ಕ ಪಂಚಾಯಿತಿಯ ಕೊಳತ್ತೂರಿನಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ಬೋನಿನೊಳಗೆ ಚಿರತೆ ಸೆರೆಯಾಗಿದೆ. ಸೆರೆಯಾದ ಚಿರತೆ ಶರೀರದಲ್ಲಿ ಸಣ್ಣಪುಟ್ಟ ಗಾಯಗಳುಂಟಾಗಿದ್ದು, ಬೋನಿಲೊಳಗೆ ಸೆರೆಯಾಗುವ ಸಂದರ್ಭ ಗಾಯಗಳುಂಟಾಗಿರಬೇಕೆಂದು ಸಂಶಯಿಸಲಾಗಿದೆ. ಕೊಳತ್ತೂರಿನ ಬರೋಟಿ ಸನಿಹ ನಿಡುವೋಟ್ ಎಂಬಲ್ಲಿ ಜನಾರ್ದನನ್ ಎಂಬವರ ರಬ್ಬರ್ ತೋಟದಲ್ಲಿ ಅರನ್ಯ ಇಲಾಕೆ ಅಧಿಕಾರಿಗಳು ಅಳವಡಿಸಿದ್ದ ಬೋನಿನೊಳಗೆ ಚಿರತೆ ಸೆರೆಯಾಗಿದೆ. ಚಿರತೆ ಸೆರೆಯಾಗಿರುವ ವಿಷಯ ತಿಳಿಯುತ್ತದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮ ಕೈಗೊಂಡಿದ್ದರು. ಚಿರತೆ ನೋಡಲು ಜನಪ್ರವಾಹವೇ ಹರಿದು ಬಂದಿತ್ತು. ಜನರನ್ನು ನೋಡುತ್ತಿದ್ದಂತೆ ಚಿರತೆ ಜೋರಾಗಿ ಘರ್ಜಿಸಲಾರಂಭಿಸಿದ್ದು, ನಂತರ ಬೋನನ್ನು ಪಳ್ಳತ್ತುಂಗಾಲ್ ಅರಣ್ಯ ಇಲಾಖೆ ಕಚೇರಿಗೆ ಕೊಂಡೊಯ್ದಿದ್ದಾರೆ.
ಚಿರತೆ ಸಂಚಾರದ ಭೀತಿ ಎದುರಿಸುತ್ತಿರುವ ಮಲೆನಾಡುಪ್ರದೇಶದ ಜನತೆಗೆ ಒಂದಷ್ಟು ಸಮಾಧಾನ ತಂದುಕೊಟ್ಟಿದೆ. ಆದರೆ ಸೆರೆಹಿಡಿದ ಚಿರತೆಯನ್ನು ಅರಣ್ಯಾಧಿಕಾರಿಗಳು ಎಲ್ಲಿ ಬಿಡುತ್ತಾರೆ ಎಂಬ ಬಗ್ಗೆ ಇನ್ನೂ ಖಚಿತಗೊಂಡಿಲ್ಲ. ಇದೇ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಫೆ. 23ರಂದು 5ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಸೆರೆಯಾಗಿದ್ದು, ನಂತರ ಇದನ್ನು ಬೆಳ್ಳೂರು-ಎಣ್ಮಕಜೆ ಪಂಚಾಯಿತಿ ಗಡಿಪ್ರದೇಶದ ನೆಟ್ಟಣಿಗೆ-ಬೆಳ್ಳೂರು ಪ್ರದೇಶದಲ್ಲಿ ಬಿಟ್ಟಿದ್ದು, ಇದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.