ನವದೆಹಲಿ: 'ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ಶೀಘ್ರವೇ ಹೊಸ ನೀತಿಯನ್ನು ಪ್ರಕಟಿಸಲಿದೆ. ಇದರಲ್ಲಿ ಗ್ರಾಹಕರಿಗೆ ಸೂಕ್ತ ರಿಯಾಯಿತಿ ನೀಡಲಾಗುವುದು' ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಸ್ತೆ ಮೂಲಸೌಕರ್ಯ ನಿರ್ಮಾಣಕ್ಕಾಗಿ ಸರ್ಕಾರ ಸಾಕಷ್ಟು ಹಣ ವ್ಯಯಿಸುತ್ತಿದೆ. ಹಾಗಾಗಿ, ಟೋಲ್ ಸಂಗ್ರಹಿಸುವ ಅಗತ್ಯವಿದೆ ಎಂದು ಸಮರ್ಥಿಸಿಕೊಂಡರು.
'2008ರ ನಿಯಮಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯ ಒಂದೇ ವಿಭಾಗದಲ್ಲಿ ಮತ್ತು ಒಂದೇ ಮಾರ್ಗದಲ್ಲಿ 60 ಕಿಲೋ ಮೀಟರ್ ಒಳಗೆ ಟೋಲ್ ಪ್ಲಾಜಾ ಸ್ಥಾಪಿಸುವುದಿಲ್ಲ. ಅಧಿವೇಶನ ಮುಕ್ತಾಯವಾದ ನಂತರ, ನಾವು ಟೋಲ್‌ಗಾಗಿ ಹೊಸ ನೀತಿ ಘೋಷಿಸಲಿದ್ದೇವೆ. ಆಗ, ಈ ಈ ಸಮಸ್ಯೆ ಬಗೆಹರಿಸಲಾಗುವುದು' ಎಂದು ಹೇಳಿದರು.
'ನಾಲ್ಕು ಪಥ, ಆರು ಪಥ... ಹೀಗೆ ನಾವು ಸಾಕಷ್ಟು ದೊಡ್ಡ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಬ್ರಹ್ಮಪುತ್ರ ನದಿಗೆ ಹಲವು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ನಿಧಿ ಸಂಗ್ರಹಿಸುತ್ತಿದ್ದೇವೆ. ಹಾಗಾಗಿ, ಸುಂಕವಿಲ್ಲದೆ, ನಾವು ಮೂಲಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ. ನಾವು ಈ ವಿಚಾರದಲ್ಲಿ ಇನ್ನೂ ಉದಾರವಾಗಿದ್ದು, ನಾಲ್ಕು ಪಥದ ರಸ್ತೆಗಳಲ್ಲಿ ಮಾತ್ರ ಟೋಲ್ ಶುಲ್ಕ ವಿಧಿಸುತ್ತಿದ್ದೇವೆ. ಎರಡು ಪಥದ ಸುಸಜ್ಜಿತ ರಸ್ತೆಗಳಲ್ಲಿ ಟೋಲ್ ಶುಲ್ಕ ವಿಧಿಸಿಲ್ಲ' ಎಂದು ಹೇಳಿದರು.
2023-24ರಲ್ಲಿ ದೇಶದಲ್ಲಿ ಒಟ್ಟು ₹64,809.86 ಕೋಟಿ ಟೋಲ್ ಸಂಗ್ರಹ ಆಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 35ರಷ್ಟು ಹೆಚ್ಚಾಗಿದೆ. 2019-20ರಲ್ಲಿ ₹27,503 ಕೋಟಿ ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.
ನಿತಿನ್ ಗಡ್ಕರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಉತ್ತಮ ರಸ್ತೆಯನ್ನು ಬಯಸಿದಾಗ ಅದಕ್ಕೆ ಶುಲ್ಕ ಪಾವತಿಸಬೇಕು. ಇದು ಇಲಾಖೆಯ ನೀತಿಯಾಗಿದೆ.