ಕೊಚ್ಚಿ: ಬುಧವಾರ ಇಲ್ಲಿನ ದೇವಾಲಯದ ಉತ್ಸವಕ್ಕೆ ಕರೆತಂದಿದ್ದ ಆನೆಯೊಂದು ಸಂಜೆ ಇದ್ದಕ್ಕಿದ್ದಂತೆ ಉದ್ರೇಕಗೊಂಡು ಹಲವಾರು ವಾಹನಗಳಿಗೆ ಹಾನಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಂಜೆ 5 ಗಂಟೆ ಸುಮಾರಿಗೆ ಎಡಕೊಚ್ಚಿ ಶ್ರೀಕೃಷ್ಣ ದೇವಾಲಯದ ಬಳಿ ಸಂಭವಿಸಿದೆ ಎಂದು ಪಲ್ಲೂರುತಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀಕೃಷ್ಣ ದೇವಾಲಯದ ಉತ್ಸವಕ್ಕಾಗಿ ಆನೆಯನ್ನು ತರಲಾಗಿತ್ತು ಎಂದು ಅವರು ಹೇಳಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆನೆಯ ಉದ್ರೇಕಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ದೃಶ್ಯಗಳಲ್ಲಿ ಆನೆ ದೇವಾಲಯದ ಆವರಣಕ್ಕೆ ಓಡಿಹೋಗಿ, ನಿಲ್ಲಿಸಿದ್ದ ಕಾರುಗಳನ್ನು ಉರುಳಿಸಿ ಪಕ್ಕಕ್ಕೆ ತಳ್ಳಿ ಅಪಾರ ಹಾನಿಯನ್ನುಂಟುಮಾಡಿರುವುದು ಕಂಡುಬಂದಿದೆ.
ಆನೆ ಉದ್ರೇಕಗೊಂಡ ಬಳಿಕ ಎರಡು ಗಂಟೆ ಹರಸಾಹಸ ಪಟ್ಟು ಅಂತಿಮವಾಗಿ ನಿಯಂತ್ರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.