ಬಾಗ್ದಾದ್: ಇರಾಕ್ ಮತ್ತು ಸಿರಿಯಾಗೆ 'ಇಸ್ಲಾಮಿಕ್ ಸ್ಟೇಟ್' ಸಂಘಟನೆಯ ನಾಯಕನಾಗಿದ್ದ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಶುಕ್ರವಾರ ಹೇಳಿದ್ದಾರೆ. ಹತ್ಯೆಯಾದ ಉಗ್ರ, ಇರಾಕ್ ಮತ್ತು ವಿಶ್ವದ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿದ್ದ ಎಂದೂ ಉಲ್ಲೇಖಿಸಿದ್ದಾರೆ.
ಅಬು ಖದೀಜಾ ಎಂದೂ ಕರೆಯಲಾಗುತ್ತಿದ್ದ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರುಫಾಯಿ ಎಂಬಾತನನ್ನು, 'ಇಸ್ಲಾಮಿಕ್ ಸ್ಟೇಟ್' ವಿರುದ್ಧ ಹೋರಾಡುತ್ತಿರುವ ಅಮೆರಿಕ ಪಡೆಗಳ ಬೆಂಬಲದೊಂದಿಗೆ ಇರಾಕ್ ಸೇನೆ ಹೊಡೆದುರುಳಿಸಿದೆ ಎಂದು ಸುಡಾನಿ ತಿಳಿಸಿದ್ದಾರೆ.
ಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರಭಾವ ಹೊಂದಿರುವ ಈ ಸಂಘಟನೆಯು, ಮಧ್ಯಪ್ರಾಚ್ಯ, ಏಷ್ಯಾದಲ್ಲಿ ನೆಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದೆ.
ಈ ಸಂಘಟನೆಯ ನಾಯಕನಾಗಿದ್ದ ಅಬು ಬಕರ್ ಅಲ್-ಬಾಗ್ದಾದಿ, ಇರಾಕ್ ಮತ್ತು ಸಿರಿಯಾದ ಕಾಲುಭಾಗದಷ್ಟು ಪ್ರದೇಶವನ್ನು ಕ್ಯಾಲಿಫೇಟ್ (ಪ್ರವಾದಿ ಮೊಹಮ್ಮದ್ ಅವರ ಉತ್ತರಾಧಿಕಾರಿ ನೇತೃತ್ವದ ರಾಜ್ಯ) ಎಂದು 2014ರಲ್ಲಿ ಘೋಷಿಸಿದ್ದ. ಬಾಗ್ದಾದಿಯನ್ನು 2019ರಲ್ಲಿ ವಾಯವ್ಯ ಸಿರಿಯಾದಲ್ಲಿ ಯುಎಸ್ ವಿಶೇಷ ಪಡೆಗಳು ಹತ್ಯೆ ಮಾಡಿದ್ದವು. ಅದಾದನಂತರ, ಸಂಘಟನೆಯ ಸಾಮರ್ಥ್ಯ ಕುಸಿಯಲಾರಂಭಿಸಿತ್ತು.
ಆದರೆ, 'ಹಲವು ವರ್ಷಗಳಿಂದ ಕುಗ್ಗಿಹೋಗಿದ್ದ ಇಸ್ಲಾಮಿಕ್ ಸ್ಟೇಟ್, ಪುನಃ ಸಂಘಟಿತವಾಗುತ್ತಿದೆ' ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಕಳೆದ ಜುಲೈನಲ್ಲಿ ಹೇಳಿಕೆ ನೀಡಿತ್ತು.
ಇರಾಕ್ ಮತ್ತು ಸಿರಿಯಾದಲ್ಲಿ 2024ರ ಮೊದಲಾರ್ಧದಲ್ಲಿ 153 ದಾಳಿಗಳನ್ನು ನಡೆಸಿರುವುದಾಗಿ ಸಂಘಟನೆಯು ಹೇಳಿಕೆ ನೀಡಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಸಂಘಟನೆಯು ದಾಳಿಯನ್ನು ತೀವ್ರಗೊಳಿಸಿರುವುದನ್ನು ಆಧರಿಸಿ, ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿಕೆ ಬಿಡುಗಡೆ ಮಾಡಿತ್ತು.