ಕೇಪ್ ಕೆನವೆರಲ್: ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿಕೊಂಡಿದ್ದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ವಾಪಸ್ ಆಗುವುದು ಸನ್ನಿಹಿತವಾಗಿದೆ.
ನಾಸಾ ಕಳುಹಿಸುತ್ತಿರುವ ಇಬ್ಬರು ಗಗನಯಾನಿಗಳು ಐಎಸ್‌ಎಸ್ ತಲುಪಿದ ನಂತರ, ಈ ತಿಂಗಳಾಂತ್ಯಕ್ಕೆ ಸುನಿತಾ ಹಾಗೂ ಬುಚ್ ಅವರು ಭೂಮಿಯತ್ತ ಪಯಣ ಆರಂಭಿಸುವರು.
ಸುನಿತಾ ಹಾಗೂ ಬುಚ್ ಅವರನ್ನು ಕರೆತರಲು ಸ್ಪೇಸ್‌ಎಕ್ಸ್ ಮುಂದಿನವಾರ ಗಗನನೌಕೆಯೊಂದನ್ನು ಐಎಸ್‌ಎಸ್‌ಗೆ ಕಳುಹಿಸುತ್ತಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಚ್ ವಿಲ್ಮೋರ್,'ರಾಜಕೀಯವು ಜೀವನದ ಭಾಗವಾಗದರೂ, ನಾನು ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಭೂಮಿಗೆ ವಾಪಸ್ ಕರೆತರುವ ವಿಚಾರದಲ್ಲಿ ಅದು ಅಡ್ಡಿಯಾಗಿಲ್ಲ' ಎಂದು ಹೇಳಿದ್ದಾರೆ.
ಬುಚ್ ಹಾಗೂ ಸುನಿತಾ ಅವರನ್ನು ಭೂಮಿಗೆ ವಾಪಸ್ ಕರೆತರುವ ಕುರಿತು ಕಳೆದ ತಿಂಗಳು ಮಾತನಾಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಸ್ಪೇಸ್‌ಎಕ್ಸ್ ಮುಖಸ್ಥ ಇಲಾನ್ ಮಸ್ಕ್, 'ಇಬ್ಬರು ಗಗನಯಾನಿಗಳನ್ನು ವಾಪಸ್ ಕರೆತರುವ ಪ್ರಕ್ರಿಯೆಗೆ ವೇಗ ನೀಡಲಾಗುವುದು' ಎಂದಿದ್ದರು. ಅಲ್ಲದೆ, ಇಂತಹ ಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ ಎಂದೂ ದೂರಿದ್ದರು. ಹೀಗಾಗಿ, ಬುಚ್ ಅವರ ಈ ಹೇಳಿಕೆ ಗಮನಾರ್ಹ.