ಬಿಜಾಪುರ: ತಲೆಗೆ ₹1 ಲಕ್ಷ ಬಹುಮಾನ ಘೋಷಣೆಯಾಗಿದ್ದ ಓರ್ವ ಸೇರಿ ಒಟ್ಟು ಐವರು ನಕ್ಸಲರನ್ನು ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾರಾಯಣ ಭಂಡಾರಿ, ಧರ್ಮ ಕಾಕಾ, ನೀಲ ಕಾಕ, ಕಿಸ್ತಾ ಧ್ರುವ ಮತ್ತು ರಾಮಬಾಬು ಪುಣೆಂ ಎಂಬುವವರನ್ನು ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಉಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರುದ್ಬಾಕ ಗ್ರಾಮದ ಅರಣ್ಯದ ಬಳಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು, ಕೇಂದ್ರೀಯ ಮೀಸಲು ಪಡೆ, ಕೋಬ್ರಾ ಪಡೆ ಈ ಪ್ರದೇಶದಲ್ಲಿ ಸೋಮವಾರ ಶೋಧ ಕಾರ್ಯ ಆರಂಭಿಸಿತ್ತು. ಬಂಧಿತ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆಯ ಮುಖ್ಯಸ್ಥ ನಾರಾಯಣ ಭಂಡಾರಿ ತಲೆಗೆ ₹ 1 ಲಕ್ಷ ಬಹುಮಾನ ಘೋಷಣೆಯಾಗಿತ್ತು. ಉಳಿದ ನಾಲ್ವರು ಈ ಸಂಘಟನೆಯ ಸದಸ್ಯರು.
ಅವರಿಂದ ಮಾವೋವಾದಿ ಕರಪತ್ರಗಳು ಮತ್ತು ಬ್ಯಾಟರಿಗಳನ್ನು ಭದ್ರತಾಪಡೆಗಳು ವಶಪಡಿಸಿಕೊಂಡಿದೆ ಎಂದು ಅಧಿಕಾರಿ ಹೇಳಿದ್ದಾರೆ. ಸ್ಥಳೀಯ ನ್ಯಾಯಾಲಯವು ಅವರನ್ನು ಜೈಲಿಗೆ ಕಳುಹಿಸಿದೆ.